ಸ್ಟೇಟಸ್ ಕತೆಗಳು (ಭಾಗ ೧೪೩) - ಮೌನದ ಹೆಜ್ಜೆ
ಕತ್ತಲೆಯ ದಾರಿಯಲ್ಲಿ, ಬೀದಿದೀಪಗಳ ಅಡಿಯಲ್ಲಿ, ಮಿನುಗುವ ರಸ್ತೆಯಲ್ಲಿ ಮೌನ ತಪಸ್ಸಿಗೆ ಕುಳಿತ ಹಾಗಿರುತ್ತದೆ ಆ ಜಾಗ. ಆಲಿಸುವ ಮನಸ್ಸಿದ್ದರೆ ಇಲ್ಲೊಮ್ಮೆ ಕುಳಿತು ಮಾತನಾಡಬಹುದು. ನಿಮಗೊಂದಿಷ್ಟು ಹೆಚ್ಚಿನ ಮೌನದ ಮಾತುಗಳು ಸಿಗಬೇಕಾದರೆ ಅಲ್ಲಿ ಆ ರಸ್ತೆ ಕೂಡುವಲ್ಲಿ ನಿಲ್ಲಬೇಕು. ಹಳ್ಳಿಯ ರಸ್ತೆ ಪೇಟೆಯನ್ನು ಸೇರುವ ಅಚ್ಚರಿಯ ವೃತ್ತವಿದು.
ಇಲ್ಲೊಂದು ಸಮ್ಮಿಳಿತವಾದ ಸಂಸ್ಕೃತಿ ಇದೆ. ಹಳ್ಳಿ ನಗರವಾಗುತ್ತದೆ, ನಗರ ಹಳ್ಳಿ ಆಗುವ ಕೊಂಡಿ ಇಲ್ಲಿ ಜೋಡಿಸಲ್ಪಟ್ಟಿದೆ. ಸಮ್ಮಿಶ್ರಣದ ಹೂಜಿಯೊಂದು ಬಿರುಕುಗಳನ್ನು ಜೋಡಿಸಿಕೊಂಡು ಮಾರಾಟವಾಗುತ್ತಿದೆ. ಹಳ್ಳಿಯ ರಸ್ತೆಗೆ ಪೇಟೆಯ ರಸ್ತೆಯನ್ನು ಅಂಟಿಸಿದ್ದರಿಂದ ಭೂಮಿಯ ಬೆಲೆ ಏರಿದೆ, ಭತ್ತ ಬೆಳೆಯುತ್ತಿದ್ದ ಗದ್ದೆಯ ಮೇಲೆ ಕಾಂಕ್ರೀಟ್ ಬೆಳೆ ಬೆಳೆದಿದೆ. ಮನೆಯ ಹೊರಗಿನ ಬೇಲಿ ಒಳಗಿನ ಕೊಠಡಿಗೂ ಕಾಲಿಟ್ಟಿದೆ. ಮನಸ್ಸು ಅಲ್ಲಲ್ಲಿ ತೇಪೆಗಳನ್ನು ಹಚ್ಚಿ ನಿಂತಿದೆ. ದುಡ್ಡು ಜೀವನವನ್ನು ಸಾಗಿಸುತ್ತಿದೆ. ಬೆಳಗಿಗಿಂತ ರಾತ್ರಿಯ ಮೌನವನ್ನು ಇಷ್ಟಪಡೋರು ಅಲ್ಲಿ ಕಾಯುತ್ತಾರೆ. ದೊಡ್ಡ ನಗರಕ್ಕೆ ತೆರಳುವ ಬಸ್ಸು ಇಲ್ಲಿ ನಿಲ್ಲುತ್ತದೆ. ಇಳಿಸುತ್ತದೆ, ಹತ್ತಿಸುತ್ತದೆ ವ್ಯಕ್ತಿ ಮತ್ತು ಕನಸುಗಳನ್ನು. ಒಂದಷ್ಟು ಸಮಯದ ಹಿಂದೆ ಹತ್ತುವವರು ಹೆಚ್ಚಿದ್ದರು, ಸದ್ಯಕ್ಕೆ ಇಳಿಯುವವರು ತುಂಬಿದ್ದಾರೆ. ಹಳ್ಳಿಯ ರಸ್ತೆ ನಗುತ್ತಾ ಮೌನಕ್ಕೊಂದು ಹೊಸ ಭಾಷ್ಯ ಬರೆಯುತ್ತಿದೆ. ಕಥೆಯೊಳಗಿನ ನಿಜದ ಅರಿವಾಗಲು ನೀವೊಮ್ಮೆ ನಿಶಾ ದೇವಿಯ ಅನುಮತಿ ಪಡೆದು ಇಲ್ಲಿ ನಡೆಯಬೇಕು. ಅನುಭವಿಸಿದ ಸ್ವಾದವನ್ನು ಬರೆಯಲು ನನ್ನ ಲೇಖನಿಗೆ ಸಾಧ್ಯವಾಗುತ್ತಿಲ್ಲ. ಮೌನದ ಹೆಜ್ಜೆಯ ಜಾಡು ನಿಮಗೆ ಅರಿವಾಗುವಾಗವರೆಗೆ ಹಣೆಯ ನಿರಿಗೆ ಸಡಿಲವಾದದು. ಒಮ್ಮೆ ಅರಿತರೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ