ಸ್ಟೇಟಸ್ ಕತೆಗಳು (ಭಾಗ ೧೪೪) - ಮಾತು
"ಮೌನ ಕೊಡುವ ಉತ್ತರ ಮಾತು ನೀಡಲಾರದು " ಇದು ಚಿದಂಬರನ ಅರಿವಿನ ಮಾತು. ಓದುವಿಕೆಯ ಹಸಿವು ನೀಗಿಸುವ ಮಾಧ್ಯಮ ಇದಲ್ಲವೆಂದು ಅರಿತು ಇಂಜಿನಿಯರಿಂಗ್ ಪದವಿಯ ತೊರೆದು ಪದವಿ ಸೇರಿದ. ಹೇಳುವ ಮಾತುಗಳಿಗೆ ಉತ್ತರ ನೀಡುತ್ತಾ ಹೊರಟರೆ, ಆತನ ಜೀವನ ಪ್ರಶ್ನೋತ್ತರಗಳಲ್ಲೇ ಮುಗಿದುಹೋಗುತ್ತಿತ್ತು. ಅಂದು ನಕ್ಕವರು ಇಂದು ಇಂದವನ ಸಾಧನೆಯನ್ನ ತಮ್ಮದೆನ್ನುತ್ತಿದ್ದಾರೆ. ಹಣ ಸಂಪಾದನೆಯ ದಾರಿ ತೊರೆದು ಜ್ಞಾನದಾಹವನ್ನು ನೀಗಿಸಲು ಇಟ್ಟ ಹೆಜ್ಜೆಯನ್ನು ಕಿತ್ತು ತನ್ನಾಸಕ್ತಿಯ ಕಡೆಗೆ ನಡೆದಿದ್ದಾನೆ.
ಅವನು ಪ್ರೀತಿಯಲ್ಲಿ ಬಿದ್ದಿದ್ದ ಅವಳನ್ನು ಬಿಟ್ಟು ಒಂದರೆಕ್ಷಣವೂ ಇರಲಿಲ್ಲ. ತನ್ನ ಜೊತೆಯಾಗಿ ನಡೆಸಿದ್ದಾನೆ ಈಗ ಅಲ್ಲೊಂದು ಮೂಲೆಯಲ್ಲಿ ತೊಡೆ ಮೇಲೆ ಕೂರಿಸಿಕೊಂಡು ಓದುತ್ತಿದ್ದಾನೆ. ಚಿದಂಬರನ ಬದುಕಿನ ಮೌನಕ್ಕೊಂದು ಭಾಷ್ಯ ಬರೆಯುವ ದಿನಗಳು ಸರತಿಯಲ್ಲಿವೆ.
ಸಂತೆ ಗದ್ದಲದ ನಡುವೆ ಮೂಲೆಗುಂಪಾಗಿರುವ ಮೌನವನ್ನು ಹುಡುಕಿ ಎಲ್ಲರಿಗೂ ಉಚಿತವಾಗಿ ಹಂಚಬೇಕು ಬಳಕೆಯಿಲ್ಲದ ಮೌನ ಮುಂದೊಂದು ದಿನ ಮಾಯವಾದರೆ ನಮ್ಮ ಪರದಾಟ ಹೇಳಲಾಗದು. ಮೌನಕ್ಕೆ ಒಡೆಯರಾಗಿ ಬದುಕು ಬಯಲಾಗುತ್ತದೆ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ