ಸ್ಟೇಟಸ್ ಕತೆಗಳು (ಭಾಗ ೧೪೫) - ವಿಘ್ನೇಶ್
ಕಳೆದ ನಾಲ್ಕು ದಿನದಿಂದ ಅವನ ಕೈ ಸ್ಟೇರಿಂಗ್ ತಿರುಗಿಸುತ್ತಿದೆ. ಜನ ಸುರಕ್ಷಿತವಾಗಿ ಊರು ತಲುಪಿದ್ದಾರೆ. ಆದರೆ ಉತ್ಸಾಹ ಒಂದು ಚೂರು ಕಡಿಮೆಯಾಗಿ ಕಣ್ಣೊಳಗೆ ನೀರ ಬಿಂದು ಬಂಧಿಯಾಗಿದೆ. ಕಾರಣವ ಕೇಳಲು ಸಮಯವೇ ಸಿಗಲಿಲ್ಲ. ಈ ದಿನ ಮಾತಿಗೆ ಕುಳಿತೆ. ಅವನಿಗೆ ಸಂಭ್ರಮದ ದುಃಖವಿದೆ. ಗಾಡಿ ಚಾಲಕನಾಗಿ 28 ವರ್ಷವಾಯಿತು. ನಾಲ್ಕು ದಿನದ ಹಿಂದೆ ಮೌನವಾಗಿ ಗುಜರಿ ಅಂಗಡಿಯ ಮೂಲೆ ಸೇರಿದ ನನ್ನ "ವಿಘ್ನೇಶನಿಗೆ" 25 ವರ್ಷ. ಅವನ ಆರಂಭದಿಂದಲೇ ಜೊತೆಗಾರ . ಅವನು ನನ್ನೊಂದಿಗೆ ಮೊನ್ನೆಯವರೆಗೂ ತೊಂದರೆ ನೀಡದೆ ಚಲಿಸಿದ್ದಾನೆ. ನನ್ನ ಇಂದಿನ ಎಚ್ಚರದ ಸ್ಥಿತಿಗೆ ಅವನೇ ಸ್ಪೂರ್ತಿ. ಅರಳಿದ್ದು ಬಾಡಲೇ ಬೇಕು ಹಾಗಾಗಿ ವಿಘ್ನೇಶನಿಗೆ ದಿನ ಬಂದಿದೆ. ನನ್ನ ಮಗನು ಮನೆ ಬಿಟ್ಟಾಗಲೂ ವ್ಯಥೆ ಉಂಟಾಗಲಿಲ್ಲ. ಅವನ ಸ್ಟೇರಿಂಗ್ ತಿರುಗಿಸುವಾಗ ಗೇರು ಹಾಕುವಾಗ ಎದೆಯೊಳಗಿನಿಂದ ಕಣ್ಣೀರಾಗಿ ಹರಿಯುತ್ತದೆ. ಕೆಲವು ದಿನ ನೆನಪಿರಬಹುದು. ನನ್ನ ಹೊಸ ವಿಘ್ನೇಶ್ ನನ್ನೊಂದಿಗೆ ಹೊಂದಿಕೊಳ್ಳುವವರೆಗೆ. ಹೊಸ ಗೆಳೆಯನನ್ನು ಸ್ವೀಕರಿಸಬೇಕಲ್ಲವೆ? ಗಾಡಿಯೊಳಗೆ ಟೇಪ್ ರೆಕಾರ್ಡ್ ಹಾಡುತ್ತಿತ್ತು. ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬಾ, ಹಾಡಿಗೂ ಇಂದಿನ ಪರಿಸ್ಥಿತಿಗೂ ಏನು ಸಂಬಂಧವಿದೆ ಅಂತ. ಚಿಂತಿಸುತ್ತಲೇ ಇದ್ದ ನನಗೊಂದೂ ಉತ್ತರ ದೊರೆಯಲಿಲ್ಲ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ