ಸ್ಟೇಟಸ್ ಕತೆಗಳು (ಭಾಗ ೧೪೬) - ಕನ್ನಡಿ ಇಲ್ಲದ ಊರು
ಅಲ್ಲೊಂದು ಊರಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ನಾನೀಗ ನಿಮಗೆ ತಿಳಿಸುತ್ತಿದ್ದೇನೆ. ಹಾ ನಿಮಗೆ ಮಾತ್ರ? ನಾವು ನೋಡಿರುವ ಊರಿನ ಹಾಗೆ ಅದು ಇದೆ. ಆದರೆ ಅಲ್ಲೊಂದು ವಿಶೇಷವಿದೆ. ಅಲ್ಲಿ ಎಲ್ಲರ ಮುಖದಲ್ಲಿ ನಗುವಿದೆ. ಮಾಪನದ ದೃಷ್ಟಿಕೋನವಿಲ್ಲ. ಕನ್ನಡಿಯೊಳಗಿನ ಬಿಂಬದಲ್ಲಿ ಕಂಡ ಹಾಗೆ ಅಲ್ಲ. ನಿಮಗೆ ಹೇಳುವುದನ್ನು ಮರೆತಿದ್ದೆ ಆ ಊರಲ್ಲಿ ಕನ್ನಡಿ ಇಲ್ಲ ! ಅದನ್ನ ಅಲ್ಲಿ ಬಳಸುವುದು ಸಂಪ್ರದಾಯ ವಿರೋಧಿಯಂತೆ! ಕನ್ನಡಿಯ ಮುಂದೆ ಗಂಟೆ ಕಳೆಯುವ ವ್ಯವಧಾನವಿಲ್ಲ. ನಾನಿರುವ ಇರವನ್ನು ಹಾಗೇ ಸ್ವೀಕರಿಸಬೇಕು. ಅದಕ್ಕೊಂದಿಷ್ಟು ಆವರಣವನ್ನು ಸೇರಿಸಿ ಪ್ರದರ್ಶನಕ್ಕಿಡುವುದು ಅಲ್ಲ? ಇದು ಅವರ ನಂಬಿಕೆ. ನಿಜವನ್ನು ಒಪ್ಪಿ ಸಾಗಬೇಕು. ನನಗೂ ಆ ಊರು ಇಷ್ಟವಾಗಿದೆ. ಕನ್ನಡಿ ಇಲ್ಲದ ಊರು. ನನ್ನ ಸಮಯ ಉಳಿತಾಯವಾಗುತ್ತದೆ. ನಾನೊಂದಿಷ್ಟು ಕೆಲಸ ಮಾಡಬಹುದು. ಕನ್ನಡಿ ಅಂದರೆ ಇನ್ನೊಬ್ಬರ ದೃಷ್ಟಿಯೇ ನಮ್ಮ ಜೀವನ ಮಾಪನವಾಗಿದೆ ಅಲ್ವಾ?
ನಮ್ಮೊಳಗಿನ ಆಂತರ್ಯವನ್ನು ಬೆಳಗಿಸುವ ಕಾಯಕ ಮಾಡುವ ಊರು. ವಿಳಾಸ ಬೇಕಾದರೆ ಕರೆ ಮಾಡಿ ತಿಳಿಸುತ್ತೇನೆ. ಕನ್ನಡಿ ಇಲ್ಲದ ಊರಿಗೆ ಕಾಲ ಹೆಜ್ಜೆಯಲ್ಲಿ ಸಾಗುವ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ