ಸ್ಟೇಟಸ್ ಕತೆಗಳು (ಭಾಗ ೧೪೯) - ದೈವ ದೇವರು

ಸ್ಟೇಟಸ್ ಕತೆಗಳು (ಭಾಗ ೧೪೯) - ದೈವ ದೇವರು

ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು ಎಣಿಸುವಿಕೆಯ ನಡುವೆ ಸವಿದಿರುವ ಕೈ ಸಂಜೆಯ ಹೊತ್ತು ದೇವಾಲಯದ ಪ್ರಾಂಗಣದಲ್ಲಿ ನಮಸ್ಕರಿಸಿ ಒಂದಾಗುತ್ತವೆ. ಆತ ನನ್ನೊಂದಿಗೆ ಮಾತನಾಡಿದ ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನಮ್ಮೆಲ್ಲರನ್ನು ಸಲ್ಲುವ ದೈವ ದೇವರುಗಳಿಗೆ ಚಿನ್ನದ ಆಡಂಬರದ ಅಲಂಕಾರವೇ ? ಪ್ರತಿಯೊಬ್ಬನ ಮನಸ್ಸಲ್ಲಿ ಹುಟ್ಟಬೇಕಾದ ದೈವ ದೇವರುಗಳು ಗರ್ಭಗುಡಿಯೊಳಗೆ ಹುಟ್ಟೋದಿಲ್ಲ. ನನ್ನ ಭಕ್ತಿಗೆ ಸಣ್ಣ ಸಮರ್ಪಣೆ ಒಪ್ಪಿಕೊಳ್ಳೋಣ, ಆದರೆ ದೇವರು ಯಾವತ್ತೂ ಏನನ್ನೂ ಬಯಸುವುದಿಲ್ಲ. ನನಗೆ ಚಿನ್ನ, ಬೆಳ್ಳಿ ಕಿರೀಟ, ವಜ್ರವೈಡೂರ್ಯ ಬೇಕು, ಅಂತ ಪ್ರದರ್ಶನಕ್ಕೆ ವೇದಿಕೆ ನಾವೇ ಸೃಷ್ಟಿ ಮಾಡಿಕೊಂಡಿದ್ದೇವೆ. ಜಗಕೆ ಬೆಳಕು ನೀಡಿದವರನ್ನು, ಗಾಳಿ, ನೀರು, ನೀಡಿದವರನ್ನು ಜಗದಾದಿ ತನ್ನಾದಿ ಬಂಧುಗಳ ನಾಮಾದೇಯಗಳು ಯಾವ ಫಲಕದಲ್ಲಿಯೂ ಕೆತ್ತದೆ ಇರುವಾಗ ನಮ್ಮ ಕೆಲವು ಸಾವಿರ, ಸಣ್ಣ ಗೋಪುರ, ಗಡಿಯಾರ, ತಿರುಗುವ ಪ್ಯಾನ್, ಇಲ್ಲೆಲ್ಲಾ ಹೆಸರನ್ನು ಅಚ್ಚೊತ್ತಿ ಅದೇನು ಧನ್ಯತೆ ಪಡೆಯುತ್ತೇವೆಯೋ ಗೊತ್ತಿಲ್ಲ. ದೇವರು ಬಡವನಲ್ಲ ನಮ್ಮೊಳಗಿನ ಭಕ್ತಿ ನೋಡಿ ಒಲಿಯುವವನು. ಭಕ್ತಿಗೆ ಮಾಪನ ಬಿಡಬೇಡಿ, ದೇವರನ್ನು ಮುಟ್ಟಬೇಡಿ, ಮುಚ್ಚಬೇಡಿ ಅಲಂಕಾರದಿಂದ ಎಲ್ಲರೊಳಗೊಂದಾಗಿ ಒಂದಾಗುವ ದೇವರನ್ನು ಚಲಿಸಲು ಬಿಡಿ ಆತ ದೇವಾಲಯದೊಳಕ್ಕೆ ಚಲಿಸಿದ. ನಾನು ಇಲ್ಲಿಂದ ಹೊರಟು ದೇವರನ್ನು ಹುಡುಕುತ್ತಾ ಹೊರಟೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ