ಸ್ಟೇಟಸ್ ಕತೆಗಳು (ಭಾಗ ೧೫೪) - ಮೌನ ಮಾರಾಟಕ್ಕಿದೆ

ಸ್ಟೇಟಸ್ ಕತೆಗಳು (ಭಾಗ ೧೫೪) - ಮೌನ ಮಾರಾಟಕ್ಕಿದೆ

"ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ, ಹೀಗೂ ಬದುಕ್ತಾರ?" ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ. ಶಬ್ದದ ನಡುವೆ ಬದುಕು ಕಟ್ಟಿಕೊಂಡವ. ಈ ಸಲ ರಾಮಕೃಷ್ಣಾಶ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆ ತಂದು ಮೂರು ದಿನ ಅಲ್ಲೇ ಉಳಿಯುವ ಕತೆಯಾಯಿತು." ಸರ್ ನಾವು ಕಣ್ಣು ಬಿಟ್ಟಿದ್ದರಿಂದ ಮುಂದೆ ಮುಚ್ಚುವವರೆಗೂ ಶಬ್ದವನ್ನೇ ಆಹಾರವಾಗಿ ಸೇವಿಸಿ ಬದುಕುತ್ತೇವೆ. ಅದೇ ನನಗೆ ಉಸಿರು. ನೀವ್ ಇದ್ಯಾವುದೋ ಮೌನದ ಕತ್ತಲೆಗೆ ನನ್ನನ್ನು ತಂದು ಬಿಟ್ಟಿದ್ದೀರಿ .ಯಾವಾಗ ಸರ್ ಮತ್ತೆ ಊರಿಗೆ? ಒಮ್ಮೆ ಹೋಗಿಬಿಡೋಣ. ಇದು ಒಂದು ಬದುಕಾ? ಮಾತಿಲ್ಲದೆ ಬದುಕೋದು ಹೇಗೆ ಸರ್? ಅವನ ಬೇಸರದ ಮಾತುಗಳನ್ನ ಕೇಳುತಲಿದ್ದೆ. ನಾನವನಿಗೆ ಮೌನದ ಮಹತ್ವ ವಿವರಿಸಿದರೂ ಅವನೊಳಗೆ ಅದು ಇಳಿಯಲಿಲ್ಲ. ಶಬ್ದವನ್ನು ಮಾತ್ರ ನಂಬಿದವನು. ಶಬ್ಧ ಬದುಕು ಕಟ್ಟಿದೆ ಮೌನ ನನಗೆ ಹೊಟ್ಟೆಗೂ ತಲೆಗೂ ಯಾವುದನ್ನು ಆಹಾರ ನೀಡುವುದಿಲ್ಲ. ನಾನು ಶಬ್ದದ ಕಡೆಗೆ ನಡೆಯುತ್ತೇನೆ ಅಂತ ಬಸ್ಸನ್ನ ಹೊರಡಿಸಿದ. ನನ್ನೊಳಗಿನ ಮೌನದ ಮಾತು ಅವನ ಶಬ್ದದೊಳಗಿನ ಮೌನ ಇವೆರಡು ಜೀವನ ತಕ್ಕಡಿಯನ್ನು ಸಮಾನವಾಗಿ ತೋರುತ್ತಿದೆ. ಮೌನದ ಇನ್ನೊಂದು ಮುಖ ಪರಿಚಯವಾಯಿತು ಅವನು ಶಬ್ದದ ನಡುವೆ ಬದುಕುತ್ತಿದ್ದರು ಆಂತರ್ಯದೊಳಗೆ ಒಂದು ಮೌನ ಇರಬಹುದಲ್ವಾ ನೆಮ್ಮದಿಯ ಬದುಕಿನ ಮುಖದಲ್ಲಿ ನಗು ಕಾಣುತ್ತಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ