ಸ್ಟೇಟಸ್ ಕತೆಗಳು (ಭಾಗ ೧೫೯) - ಕಾರಣ?
ಆ ದಿನ ನನ್ನ ಜೊತೆ ತಿರುಗಾಡೋಕೆ ಚಪ್ಪಲಿಗೆ ಇಷ್ಟವಿರಲಿಲ್ಲವೋ ಏನೋ ಅಥವಾ ನಾನು ದಿನಾ ಅದನ್ನು ತುಳಿತಾ ಇದ್ದೇನೆ ಅನ್ನುವ ನೋವು ಕೂಡ ಆಗಿರಬಹುದು ಒಟ್ಟಿನಲ್ಲಿ ನಾನು ಅಂಗಳಕ್ಕಿಳಿದಾಗ ಚಪ್ಪಲಿ ಅಲ್ಲಿ ಕಾಣಲಿಲ್ಲ. ಬದಲಿ ಅವಕಾಶಕ್ಕೆ ಅಲ್ಲೇನೂ ಸಿಗದ ಕಾರಣ ಪಾದಯಾತ್ರೆ ಆರಂಭಿಸಿದೆ. ಕಲ್ಲುಮುಳ್ಳುಗಳು ಪಾದಕ್ಕೆ ಮೃದುವಾಗಿ ಚುಂಬಿಸುತ್ತಿದ್ದವು, ರಕ್ತ ನಿಧಾನವಾಗಿ ಹೊರಬಂದು ಮುಳ್ಳುಗಳ ಜೊತೆ ಕುಶಲೋಪರಿ ನಡೆಸುತ್ತಿತ್ತು. ನಡೆಯಲೇ ಬೇಕಾಗಿದ್ದ ಕಾರಣ ನಡಿಗೆ ಮುಂದುವರೆದಿತ್ತು. ಆಗ ಎದುರಾದವನೇ "ಕಾರಣ" ಇವನು ನನಗೆ ತುಂಬಾ ಚಿರಪರಿಚಿತ ಹಲವಾರು ಸಂದರ್ಭದಲ್ಲಿ ನನ್ನ ಮಾನ ಮತ್ತು ಪ್ರಾಣವನ್ನು ಉಳಿಸಿದ್ದ. ಹಾಗಾಗಿ ಮಾತಿಗಿಳಿದೆ. ಉಪಯೋಗವಿಲ್ಲದೆ ಮಾತುಕತೆಯನ್ನು ಮಾಡುವ ವ್ಯಕ್ತಿತ್ವ ನನ್ನದಲ್ಲ. ಆ ದಿನ "ಕಾರಣ" ತುಂಬಾ ನೋವಿನಲ್ಲಿದ್ದ." ಯಾಕೋ ಏನಾಯ್ತು?" " ಏನು ಅಂತ ಹೇಳಿ, ನನಗೆ ಈಗ ಒಂಚೂರು ಮರ್ಯಾದೆ ಸಿಗುತ್ತಿಲ್ಲ. ಎಲ್ಲರೂ ನನ್ನ ಬೇಕಾಬಿಟ್ಟಿ ಬಳಸುತ್ತಿದ್ದಾರೆ.
ಈಗೀಗ ನನಗೆ ಒಂಚೂರು ಮೌಲ್ಯವೇ ಇಲ್ಲ. ಎಲ್ಲರ ಧನಾತ್ಮಕ ವಿಷಯಗಳಿಗೆ ನಾನು ಮರೆತು ಹೋಗುತ್ತೇನೆ, ಕೆಡುಕು ಮತ್ತು ಋಣಾತ್ಮಕ ವಿಷಯಗಳಿಗೆ ನಾನೇ ರಾಯಭಾರಿಯಾಗಿ ಬಂದಿರುತ್ತೇನೆ. ಎಷ್ಟು ಜಗಳ ಹೊಡೆದಾಟ ಬೈಗುಳಗಳ ಮಧ್ಯೆ ನಾನು ಸಿಕ್ಕಿಹಾಕಿಕೊಂಡು ನರಳುತ್ತೇನೆ, ಮನಸ್ತಾಪಗಳಿಗೆ ಮರುಗಿದ್ದೇನೆ. ನನಗೊಮ್ಮೆ ಅನಿಸುತ್ತದೆ ಎದುರಿಗಿದ್ದವನ ಬಳಿ ಹೇಳಿಬಿಡಬೇಕು ಈ ವ್ಯಕ್ತಿ ನನ್ನ ಅನಗತ್ಯವಾಗಿ ಉಪಯೋಗಿಸುತ್ತಿದ್ದಾನೆ, ನಿಜ ವಿಷಯ ಇದಲ್ಲ ಅಂತ? ಏನ್ ಮಾಡ್ಲಿ ಸದ್ಯಕ್ಕೆ ನಾನು ಊರು ಬಿಡುತ್ತಿದ್ದೇನೆ. ಮುಂದೆ ಏನಿದೆಯೋ ನೀವೇ ಅನುಭವಿಸಿ". "ಕಾರಣ "ಹೊರಟ ಆತನ ಕಾಲಲ್ಲಿ ಚಪ್ಪಲಿ ಇತ್ತು ಆದರೆ ದೇಹದ ತುಂಬಾ ರಕ್ತದ ಬಿಂದುಗಳು ಜೋಡಣೆಯಾಗಿ ಸುರಿಯುತ್ತಲೇ ಇದ್ದವು. ಎಷ್ಟು ಹೇಳಿದರೂ 'ಕಾರಣ' ನಿಲ್ಲಲಿಲ್ಲ ನೀವಾದರೂ ಹೇಳಿ ವಾಪಾಸು ಕಳಿಸಿ ಕೊಡ್ತೀರಾ?, ಯಾಕೆಂದರೆ ನಾನು ಹೋ ನೀವು ಕೂಡ ಮನೆಗೆ ಹೋಗಬೇಕು . ಅವನು(ಕಾರಣ) ಜೊತೆಗೆ ಇರಲೇಬೇಕು ಅಲ್ವಾ? ನಿಮಗೂ ಕೂಡ …
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ