ಸ್ಟೇಟಸ್ ಕತೆಗಳು (ಭಾಗ ೧೬೦) - ಉತ್ತರ
ನನ್ನ ಮನೆಯ ಸ್ಥಿತಿಗತಿಗಳು ಅಡಿಮೇಲಾಗಿದೆ. ನೆಲದೊಳಗಿನ ಕೆಸರಲಿ ಕಾಲಿರಿಸಿ ಬೆವರ ಬಸಿದು ದುಡಿದು ತಿನ್ನುತ್ತಿದ್ದ ಹಲವರು ಮರೆತಿದ್ದಾರೆ ಭೂಮಿಯ ವಾಸನೆ. ದುಡಿಮೆಯ ತುಡಿತದ ಎದೆಬಡಿತ ನಿಧಾನವಾಗಿದೆ. ಗುಡಿಸಲುಗಳು ಮಹಲುಗಳಾಗಿದೆ. ಒಂದಿದ್ದ ಕೋಣೆ ಹಲವಾಗಿ ಮನಸುಗಳು ದೂರಾಗಿವೆ. ಬಾಂಧವ್ಯ ಬಿರುಕು ಬಿಟ್ಟಿದೆ. ಅಡುಗೆ ಮನೆಯ ಪಾತ್ರೆಗಳು ಮೇಲೆ ಧೂಳು ಕೂತಿದೆ. ಬೆಂಕಿ ತನ್ನ ಕೆಲಸ ಮರೆತು ಸೋಂಬೇರಿ ಆಗಿದೆ. ಮಿಕ್ಸಿಗಳು ಸದ್ದನ್ನೇ ಮರೆತಂತಿದೆ. ನಾಗಾಲೋಟದ ಧಾವಂತದಲ್ಲಿ ಆಹಾರ ಮನೆಯ ಕಾಲಿಂಗ್ ಬೆಲ್ಲು ಒತ್ತುತ್ತಿದೆ. ಬೇಕೆನಿಸಿದ ತಿಂಡಿಗಳು ಕ್ಷಣಾರ್ಧದಲ್ಲಿ ಮನೆ ಬಾಗಿಲಿಗೆ ಬಂದಿದೆ. "ವಾವ್ ಅದ್ಭುತ ಯೋಚನೆ "ಇದು ಮಾನವರಾದ ನಿಮಗನ್ನಿಸಬಹುದು. ಆದರೆ ನನ್ನ ಪರಿಸ್ಥಿತಿ ಹಾಗಿಲ್ಲವಲ್ಲ. ನೀವೇನೋ ತರಿಸಿಕೊಂಡು ತಿನ್ನುತ್ತೀರಾ ಇಲ್ಲಿ ಸಾಗಾಟಕ್ಕೆ ಬಳಕೆಯಾದ ಪ್ಲಾಸ್ಟಿಕ್ ನನ್ನೊಡಲಿಗೆ ಬಿದ್ದು ಉಸಿರು ಕಟ್ಟುತ್ತಿದೆ. ಮೊದಲೇಗೋ ನಿಭಾಯಿಸುತ್ತಿದೆ. ಒಂದಷ್ಟು ಕಡೆ ತಲೆಯೆತ್ತಿ ಉಸಿರಾಡಲು ಆದರೂ ಜಾಗ ಸಿಗುತ್ತಿತ್ತು. ಈಗ ಸಾಧ್ಯವೇ ಆಗುತ್ತಿಲ್ಲ. ನಾನು ಬದುಕಿಸುತ್ತಿರುವ ಮಾನವನ ಯೋಚನೆ ಇಂದು ನನ್ನ ಬದುಕಿಗೆ ಮುಳುವಾಗಿದೆ. ನನಗೆ ನಿಮ್ಮ ಬಗ್ಗೆ ಯೋಚನೆ ಇಲ್ಲ ಆದರೆ ನನ್ನನ್ನೇ ನಂಬಿದ ಗಿಡ ಮರ, ಪ್ರಾಣಿ ಪಕ್ಷಿ, ಈಗಷ್ಟೇ ಹುಟ್ಟಿದ ಮಗು ಇವುಗಳ ಭವಿಷ್ಯದ ಬಗ್ಗೆ ಭಯ ಕಾಡುತ್ತಿದೆ. ಇದಕ್ಕೇನಂತೀರಾ? ಸಂದರ್ಭ ಸಹಿತ ಉತ್ತರಾನಾ? ಒಂದು ವಾಕ್ಯದ ಉತ್ತರಾನಾ?.... ತಿರುಗಿ ಖಾಲಿ ಹಾಳೆಯನ್ನ ನೀಡುತ್ತಿರಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ