ಸ್ಟೇಟಸ್ ಕತೆಗಳು (ಭಾಗ ೧೭೩) - ಕಾರಣ ಯಾರು?
ಅವಳು ಉಸಿರೆಳೆದುಕೊಂಡಳು "ಏನೋ ಸಮಸ್ಯೆ ನಿಂದು ,ಛೀ ಅಸಹ್ಯ ಅನ್ಸೋದಿಲ್ಲ ನಿಂಗೆ? ಎಲ್ಲಿಯೋ ಸಂಸಾರ ನಡೆಸುತ್ತಿರುವವಳ ಹತ್ತಿರ ಮೊಬೈಲ್ ನಲ್ಲಿ ಕಾಮದ ಮಾತುಗಳನ್ನು ಆಡ್ತಿಯಲ್ಲ ನಾಚಿಕೆ ಆಗಲ್ವಾ ನಿನಗೆ, ನಿನಗೇನು? ನನ್ನ ಮೊದಲ ರಾತ್ರಿಯಲ್ಲಿ ನಾನು ಕನ್ಯೆ ಆಗಿರಲಿಲ್ಲ ಅನ್ನೋದು ನಿನ್ನ ಪ್ರಶ್ನೆಯಾ? ಹೌದು, ನನಗೆ ಮದುವೆಗೆ ಮುಂಚೆ ಒಂದು ಪ್ರೀತಿ ಇತ್ತು, ಅಲ್ಲಿ ನಡೆದ ಆಸೆಯ ಕೆಲಸದಿಂದ ನಾನು ಕನ್ಯತ್ವ ಕಳೆದುಕೊಂಡಿದ್ದು. ಸರಿನಾ !
ಕಾಲ ಬದಲಾಗಿದೆ, ಈಗ ಯಾರಿಗೆ ಪ್ರೀತಿ ಇಲ್ಲ ಹೇಳು? ಈ ಮೊಬೈಲ್ ಬಂದಮೇಲೆ ಮದುವೆಯ ನಂತರದ ಕೆಲಸ ಎಲ್ಲಾ ಮೊದಲೇ ಮೊಬೈಲ್ ನಲ್ಲಿ ಆಗ್ತಿದೆ. ನೀನೆ ಜೀವಾ, ನೀನೆ ಬದುಕು ಅಂತ ಪ್ರೀತಿಸುತ್ತೀರಾ ,ಪ್ರೀತಿಗೆ ಅವಳು ಒಪ್ಪಿದಳೋ ಮಾತುಕತೆ ಶುರು. ಅವತ್ತಿಂದ ಮಾತುಕತೆ ಶುರು. ಮದುವೆ ಯಾವಾಗ? ಎಷ್ಟು ಮಕ್ಕಳು ಬೇಕು? ಮೊದಲ ರಾತ್ರಿ ಹೇಗಿರುತ್ತೆ?
ಆಮೇಲೆ ನಿನ್ನದೊಂದು "ಫೋಟೋ" ಕಳಿಸು ಬೇರೆ ತರಹದ್ದು, ನಾನು ನಿನ್ನವನಲ್ಲವಾ? ಎಲ್ಲೋ ಒಂದು ಏಕಾಂತ ಸ್ಥಳದಲ್ಲಿ ನಾನು ನೀನು ಗಂಡ ಹೆಂಡತಿ ಅಲ್ವಾ ಒಂದಾಗೋಣ, ನಂಬಿಕೆ ಇಲ್ವಾ? ಅಂತ ಹೇಳಿ ದೇಹದ ಬಿಸಿ ಏರಿಸಿ ಕೈತೊಳೆದುಕೊಳ್ತಿಯಾ. ನಮ್ಮ ಮದುವೆ ಆದ್ಮೇಲೆ ನಾನು ನಿನ್ನಲ್ಲಿ ಏನು ಕೇಳಿಲ್ಲ ನಿನಗೆ ಏನು ಹೇಳಲಿಲ್ಲ!
ಹಿಂದಿನ ಜೀವನದ ಏನಾಗಿತ್ತು ಗೊತ್ತಿಲ್ಲ, ಆದರೆ ವರ್ತಮಾನದಲ್ಲಿ ನೆಮ್ಮದಿಯಿಂದ ಬದುಕಬೇಕು ಅಂದುಕೊಂಡೆ. ನಿನಗೇನು ಕಡಿಮೆ ಮಾಡಿದ್ದೇನೆ? ಹೇಳು ಸುಖ ಕೊಟ್ಟಿಲ್ವಾ? ನೀವು ಗಂಡಸರು ಎಷ್ಟು ಜನರನ್ನಾದ್ರೂ ಪ್ರೀತಿಸುತ್ತೀರಿ, ಭೋಗಿಸ್ತೀರಿ, ಮೋಸ ಮಾಡಿ ಕೊನೆಗೆ ಮನೆಯವರು ತೋರಿಸಿದವಳನ್ನ ಮದುವೆಯಾಗಬಹುದು. ಆದರೆ ಹುಡುಗಿಗೆ ಒಂದು ಪ್ರೀತಿ ಇದ್ರೆ ನೀವು ಒಪ್ಪಿಕೊಳ್ಳುವುದೇ ಇಲ್ಲ ಅಲ್ವಾ?. ನಿಮಗೊಂದು ಭಯ ಬರಬೇಕು! ನಮ್ಮನೆ ತಂಗಿ, ನನ್ನ ಮದುವೆಯಾಗುವ ಹೆಂಡತಿಗೆ , ನಾನು ಮಾಡಿದ ತರಹ ಬೇರೆ ಯಾರಾದರೂ ಮೋಸ ಮಾಡಿದ್ರೆ?!. ತಪ್ಪು ಕೆಲಸಕ್ಕೆ ಕೈಹಾಕುವ ಮೊದಲೇ ಈ ಭಯ ನಿಮ್ಮನ್ನು ಎಚ್ಚರಿಸಬೇಕು.
ಪ್ರೀತಿಸಿ ಮೋಸ ಮಾಡೋದು? ಮದುವೆಯಾಗಿ ಸಂದೇಹ ಪಡುವುದು?, ಇದು ಅತ್ಯಾಚಾರಕ್ಕಿಂತ ಭೀಕರ ಅರ್ಥಮಾಡಿಕೋ....ಉಸಿರು ಹೊರಹಾಕಿದಳು....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ