ಸ್ಟೇಟಸ್ ಕತೆಗಳು (ಭಾಗ ೧೭೪) - ಯಂತ್ರ
ನಿಮಗೇನಾದರೂ ಗೊತ್ತಿದೆಯಾ? ಎಲ್ಲಿ ಸಿಗುತ್ತೆ ಅಂತ. ದಯವಿಟ್ಟು ಹುಡುಕಿಕೊಡಿ. ಪುಣ್ಯ ಕಟ್ಟಿಕೊಳ್ಳಿ. ನನಗಾಗುತ್ತಿಲ್ಲ. ಈ ಸಮಸ್ಯೆ ಪರಿಹಾರ ಆಗೋಕೆ ಅದು ಬೇಕೇ ಬೇಕು. ಇನ್ನೂ ಗೊತ್ತಾಗ್ಲಿಲ್ವಾ? ಹೋ! ನಾನು ಹೇಳಿದ್ರೆ ತಾನೇ ಗೊತ್ತಾಗೋದು. ನನಗೊಂದು ಯಂತ್ರ ಬೇಕು ಅದನ್ನ ನನ್ನ ಜೊತೆ ಹಿಡಿದುಕೊಂಡು ತಿರುಗಾಡುವ ತರನೂ ಇರಬೇಕು. ಅದಕ್ಕೆ ಒಂದಿಷ್ಟು ಲಕ್ಷಣಗಳಿರಬೇಕು. ಒಬ್ಬನ ಜೊತೆಗೆ ಮಾತನಾಡುವಾಗ ಯಂತ್ರ ಅವನ ನಿಜದ ಭಾವನೆಯನ್ನು ತಿಳಿಸುವಂತಿರಬೇಕು. ಅವನೊಳಗಿನ ಮುಖವನ್ನು ತೋರಿಸಬೇಕು. ಸದ್ಯಕ್ಕೆ ಇಷ್ಟು ಸಾಕು. ನೀವು ಹೇಳಬಹುದು "ಕಣ್ಣು ಎಲ್ಲವನ್ನು ತಿಳಿಸುತ್ತೆ" ಅಂತ, ಸ್ವಾಮಿ ಜನ ಎಲ್ಲಾ ಕಲಿತುಕೊಂಡಿದ್ದಾರೆ. ಅದಕ್ಕಾಗಿ ಕೇಳುತ್ತಿರುವುದು. ನಮ್ಮವರು ಯಾರು? ಅನ್ನೋದು ಗೊತ್ತಾಗಬೇಕು, ನನ್ನ ಬಗ್ಗೆ ಏನು ಅಂದುಕೊಳ್ಳುತ್ತಿದ್ದಾರೆ, ನನಗೆ ತೊಂದರೆ ಎಲ್ಲಿಂದ ಬರಲಿದೆ, ಇದೆಲ್ಲಾ ಅರಿವಾಗುವಂತೆ ಇದ್ದರೆ ಸಾಕು. ಬಣ್ಣದ ಜಗತ್ತಿನಲ್ಲಿ ಬಣ್ಣ ಬದಲಿಸದೆ ಶುಭ್ರ ಬಿಳಿಯಾಗಿ ಉಳಿಯೋಕೆ ಸಾಧ್ಯವಾಗುತ್ತಿಲ್ಲ. ನನಗೆ ಬಣ್ಣ ಬೇಡ ಅಂತಲ್ಲ. ಜೀವನ ಪೂರ್ತಿ ಬಣ್ಣ ಬಳಿದುಕೊಂಡು ಇರೋಕೆ ಆಗೋದಿಲ್ಲ. ಅದಕ್ಕೊಂದಿಷ್ಟು ಸಹಾಯ ಮಾಡಿ. ನಿಮಗೆ ಗೊತ್ತಿದ್ದರೆ ವಿಳಾಸ ನೀಡುತ್ತೀರಾ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ