ಸ್ಟೇಟಸ್ ಕತೆಗಳು (ಭಾಗ ೧೭೯) - ಕಾಲೊರೆಸುತ್ತಾ...

ಸ್ಟೇಟಸ್ ಕತೆಗಳು (ಭಾಗ ೧೭೯) - ಕಾಲೊರೆಸುತ್ತಾ...

ಒರೆಸು ಇನ್ನೂ ಬಿಗಿಯಾಗಿ. ಎಲ್ಲವನ್ನು ನನ್ನಲ್ಲೇ ಕಳಚಿಟ್ಟು ಮುಂದುವರೆ. ಒಳಗಿನ ನೆಲಕ್ಕೆ ಮತ್ತು ನಿನಗೆ ಒಳ್ಳೆಯದು. ನಾನು ಬಾಗಿಲ ಬಳಿ ಬಿದ್ದಿರುತ್ತೇನೆ. ನನಗೆ ವಿರಾಮದ ಕ್ಷಣಗಳು ಇದ್ದಾವೆ, ಬಿಡುವಿಲ್ಲದ ವೇಳೆಯೂ ಇದೆ. ಪಾದಗಳು ನನ್ನೊಂದಿಗೆ ಸರಸವಾಡುತ್ತಾ, ಘರ್ಷಣೆ ಮಾಡುತ್ತಾ ಮುಂದುವರೆಯುತ್ತವೆ. ಕಾಲಿಗಂಟಿದ ಮತ್ತು ನಿಮ್ಮ ಚಪ್ಪಲಿ ಗಂಟಿದ ಕಲ್ಮಶಗಳನ್ನು ಇಲ್ಲಿ ತೊರೆದು ಒಳ ಚಲಿಸುತ್ತೀರಾ. ನನಗೆ ಹೆಮ್ಮೆ ಇದೆ ನಾನು ಕೆಲಸ ಸರಿಯಾಗಿ ನಿಭಾಯಿಸಿದ್ದೇನೆ ಅದಕ್ಕೆ. ಎಲ್ಲರ ಕಾಲಡಿ ನಾನಿದ್ದೇನೆ ಅನ್ನುವ ಬೇಜಾರು ನನಗಿಲ್ಲ. 

ಸ್ವಚ್ಛತೆಯ ರಾಯಭಾರಿ ನಾನು ಅನ್ನುವ ಹೆಮ್ಮೆಯಿದೆ.  ನನ್ನ ಬಣ್ಣ ಬದಲಾದಾಗ ನೀವು ಒಂದಿಷ್ಟು ನೀರು ಸುರಿದು ಸ್ವಚ್ಛಗೊಳಿಸಿ ನನ್ನ ಉಸಿರಾಟಕ್ಕೆ ಅನುಮಾಡಿ ಕೊಡುತ್ತೀರಾ, ಅದು ಸಂತಸದ ಕ್ಷಣಗಳಲ್ಲೊಂದು. ನಿಮಗೆ ಹೇಳೋಕೆ ನಾನ್ಯಾರು ಆದರೂ ಕೇಳುವಿರಾದರೆ ಒಂದು ಮಾತು ಹೇಳುತ್ತೇನೆ, ನೀನು ನನ್ನನ್ನು ದಾಟಿ ಮುಂದುವರೆಯುವಾಗ ನಿನ್ನೊಳಗಿರುವ ಅಹಂಕಾರ, ಸಿಟ್ಟು, ಕಪಟತನ ಎಲ್ಲವನ್ನು ನನ್ನ ಬಳಿ ಕಾಲೊರೆಸುತ್ತಾ ಅಲ್ಲೇ ಬಿಟ್ಟು ಮುಂದುವರಿಯಿರಿ. ಯಾಕೆಂದರೆ ನೀ ಮುಂದೆ ಸಂಧಿಸುವ ಅವರ ಮನಸ್ಸುಗಳು ನಿರ್ಮಲವಾಗಿರುತ್ತದೆ. ಅದಕ್ಕೊಂದಿಷ್ಟು ಕಲ್ಮಶ ತುಂಬೋದು ಬೇಡ ಅಂತ. ಹಾಗಾಗಿ ಕೇಳಿಕೊಳ್ಳುವುದಿಷ್ಟೆ ನನ್ನನ್ನು ದಾಟಿ ಮುಂದುವರೆಯುವಾಗ ನೀನು ಹೊತ್ತುಕೊಂಡು ಬಂದಿರುವ ಕೆಟ್ಟದ್ದು ಅನ್ನುವ ಎಲ್ಲ ವಿಚಾರವನ್ನು ನನ್ನ ಮೇಲೆ ಸುರಿದು ಒಳನಡಿ...  ಹೇಗೆ ಆಗಬಹುದಾ....?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ