ಸ್ಟೇಟಸ್ ಕತೆಗಳು (ಭಾಗ ೧೮೦) - ಕಲ್ಲಾಗುವುದು

ಸ್ಟೇಟಸ್ ಕತೆಗಳು (ಭಾಗ ೧೮೦) - ಕಲ್ಲಾಗುವುದು

"ಆಗ್ತಾ ಇಲ್ಲಪ್ಪ ! ಈ ಕಷ್ಟಗಳು, ಎದುರಲ್ಲಿ ನಡೆಯುವ ಮೋಸದಾಟಗಳು, ನಯವಂಚನೆ, ಸೋಲು, ಇದೆಲ್ಲವನ್ನು ಎದುರಿಸಿ ಬಾಳೋಕಾಗಲ್ಲ. ಮನುಷ್ಯನಾಗಿ ಇರುವುದಕ್ಕಿಂತ ಕಲ್ಲಾಗಿ ಬದುಕಿದರೆ ಆರಾಮವಾಗಿರಬಹುದು. ಚಿಂತೆಯಿಲ್ಲದೆ".

"ಮಗಾ ಕಲ್ಲಾಗಿರುವುದು ಸುಲಭ ಅಂದುಕೊಂಡ್ಯ? ಇಲ್ಲಪ್ಪ! ಅದುವೇ ತುಂಬಾ ಕಷ್ಟದ ಕೆಲಸ. ಹಿಂದೆ ಅಹಲ್ಯೆ  ತಾಳಿಕೊಂಡಳು. ನೀನು ಕಲ್ಲಾದರೆ ಏನೂ ಪ್ರತಿಕ್ರಿಯಿಸದೆ ಜೀವನಪೂರ್ತಿ ತಟಸ್ಥನಾಗಿರಬೇಕು. ಸಂಭ್ರಮವನ್ನು  ಹೇಳಿಕೊಳ್ಳಕಾಗಲ್ಲ, ಕಣ್ಣೀರು ಹರಿಸೋಕ್ಕಾಗಲ್ಲ, ಜೀವದೊಳಗೆ ಜೀವಿಸಬೇಕು ಮಗ. ಎದುರಿನಿಂದ ಬಂದೋರು ನಿನ್ನನ್ನ ಹೊಡೆಯಬಹುದು, ತುಳಿಯಬಹುದು, ಅಸಹ್ಯ ಒರೆಸಬಹುದು, ಮೂರ್ತಿಯಾಗಿಸಬಹುದು, ಕಾಲ ಚಪ್ಪಡಿ ಮಾಡಬಹುದು, ಕೆಸರಿನ ಹೊಂಡಕ್ಕೆ ನೂಕಬಹುದು, ಗೋಪುರದ ಎತ್ತರಕ್ಕೇರಿಸಬಹುದು,  ಪಿಸುಮಾತು ಕೇಳಬಹುದು, ಸುಳ್ಳು ಮೋಸಗಳು ಮರೆಯಲ್ಲಿ ನಡೆಯಬಹುದು, ಏನಾದರೂ ನೀನು ಮಾತನಾಡುವ ಹಾಗಿಲ್ಲ ಅಷ್ಟು ತಾಳಿಕೊಳ್ಳೋಕೆ ಸಾಧ್ಯವಿಲ್ಲಪ್ಪ. ಹೀಗಿರುವಾಗ ಆ ಕ್ಷಣವನ್ನು ಅನುಭವಿಸಿ, ಪ್ರತಿಕ್ರಿಯಿಸಿ, ಕೆಲವನ್ನ ತೊರೆದು ಮನಸ್ಸು ಹಗುರ ಮಾಡಿ ಮುಂದುವರೆಯಬೇಕು. ಎಲ್ಲ ಭಾರವನ್ನು ಹೊತ್ತರೆ ಆಳಕ್ಕೆ ಹೂತು ಹೋಗುತ್ತೀಯಾ. ಕಲ್ಲಾಗುವುದಕ್ಕಿಂತ ಜೀವಂತವಾಗಿರು, ಪ್ರತಿಕ್ರಿಯಿಸು......" "ಮಾತು ಹೌದೆನ್ನಿಸಿತು. ಕಲ್ಲಿಗೂ ಕಷ್ಟವಿದೆ ಅಲ್ವಾ..?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ