ಸ್ಟೇಟಸ್ ಕತೆಗಳು (ಭಾಗ ೧೮೨) - ಮಳೆಯ ಹಸಿವು

ಸ್ಟೇಟಸ್ ಕತೆಗಳು (ಭಾಗ ೧೮೨) - ಮಳೆಯ ಹಸಿವು

ಮಳೆಯ ಜೋರಿಗೆ ನನಗೆ ರಸ್ತೆಯಲ್ಲಿ ನಡೆಯೋಕೆ ಆಗ್ತಿಲ್ಲ. ಛತ್ರಿ ತೂತಾಗುವುದೋ ಅನ್ನುವಷ್ಟು ರಭಸದಿ ಮಳೆ ಸುರಿಯುತ್ತಿತ್ತು. ಇನ್ನು ನಡೆದು ಪೂರ್ತಿ ಒದ್ದೆಯಾಗಿ ಅಮ್ಮನಲ್ಲಿ ಬೈಸಿಕೊಳ್ಳುವುದಕ್ಕಿಂತ ಅಂಗಡಿಯ ಪಕ್ಕ ನಿಲ್ಲುವುದೇ ಒಳಿತು ಅಂತ ನಿಂತುಬಿಟ್ಟೆ. ನಾಲ್ಕು ರಸ್ತೆಗಳು ಕೂಡುವ ಜಾಗವದು. ಗಾಡಿಗಳ ಹೆಡ್ ಲೈಟ್ ಗಳು ಮಿನುಗುತ್ತಾ ಸಾಗುತ್ತಿದ್ದವು. ನೀರು ಪಕ್ಕದ ಚರಂಡಿಯಲ್ಲಿ ಜಾಗ ಸಿಗದೆ ರಸ್ತೆಯಲ್ಲಿ ಸುಳಿದಾಡುತ್ತಿತ್ತು. ರಸ್ತೆಗೆ ನೀರು ಗಾಳಿಯ ವೇಗಕ್ಕೆ ದಿಕ್ಕು ಬದಲಿಸುತ್ತಿತ್ತು. ಗಾಡಿಯ ಚಕ್ರಕ್ಕೆ ಸಿಲುಕಿ ಒಮ್ಮೆ ಮೇಲೇರಿ ಕೆಳಗಿಳಿಯುತ್ತಿತ್ತು. ಆ ವೇಳೆ ತಲೆಗೊಂದು ಸೂರು ಬೇಕು ಅಂತ ಬಯಸುವವರ ನಡುವೆ ಅವನೊಬ್ಬ ರಸ್ತೆ ಬದಿ ನಿಂತ ಕಾರುಗಳ ಗ್ಲಾಸ್ ಬಡಿಯುತ್ತಿದ್ದ, ರೈನ್ ಕೋಟ್ ಒಳಗಿರುವ ಗೂಢಾಚಾರಿಗಳ ಮುಂದೆ ನಿಂತು ಕೇಳುತ್ತಿದ್ದ. ಅವನ ಬಳಿ ಪ್ಲಾಸ್ಟಿಕ್ ಒಳಗಿರುವ ಮಾಸ್ಕ್ ಗಳು ಕೆಲವು ಆಟಿಕೆಗಳು, ಇನ್ನೊಂದಿಷ್ಟು ಬ್ಯಾಗಿನೊಳಗೆ ಇತ್ತು. ನನಗದು ನಿಂತಲ್ಲಿಗೆ ಕಾಣುತ್ತಿರಲಿಲ್ಲ. 

ಮಳೆ ನಿಂತ್ರೆ ಸಾಕು ಎನ್ನುವವರಿಗೆ ದುಡ್ಡು ತೆಗೆದು ಖರೀದಿಸುವಷ್ಟು ವ್ಯವಧಾನ ಇಲ್ಲ. ಕನ್ನಡಿ ಇಳಿಸಿ ಗಾಡಿಯೊಳಗೆ ನೀರೆಳುದುಕೊಳ್ಳುವ ಆತುರವೂ ಇಲ್ಲ. ಅವನ ಹಸಿವು ನೀರಿನೊಂದಿಗೆ ಇಳಿಯುತ್ತಿತ್ತು. ಅವನ ತುಡಿತ ನೋಡಿದರೆ ಖಾಲಿಯಾಗಲೇಬೇಕೆಂದು ಆತುರವಿತ್ತು. ದುಡ್ಡಿನ ಅವಶ್ಯಕತೆಯೂ ಇತ್ತು. ಅಲ್ಲಿದ್ದವರಿಗೆ ನನ್ನನ್ನು ಸೇರಿ ಅದನ್ನು ಖರೀದಿಸುವ ಅವಶ್ಯಕತೆ ಇರಲಿಲ್ಲ. ಅವನ ನೋವು ನಮ್ಮದು ಅನ್ನಿಸಲಿಲ್ಲ. ಮಳೆ ನಿಧಾನವಾಯಿತು ಗಾಡಿಗಳು ಚಲಿಸಿದವು. ಜನರು ಚದುರಿದರು. ಅವನು ಜಾಗ ಬದಲಿಸಿದ ಖರೀದಿಸುವವರ ಹುಡುಕುತ್ತಾ. ಹಸಿವಿದ್ದರೆ ಮಾತ್ರ ನಾವು ಜೀವಂತವಾಗಿರುವುದು ಅಲ್ವಾ. ಇಲ್ಲದಿದ್ದರೆ ನಮಗೂ ಸತ್ತವರಿಗೂ ಏನು ವ್ಯತ್ಯಾಸ ? ಅವನಿಗೆ ಹೊಟ್ಟೆಯ ಹಸಿವಿತ್ತು... ನಮಗೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ