ಸ್ಟೇಟಸ್ ಕತೆಗಳು (ಭಾಗ ೧೮೬) - ಮೋಡ

ಸ್ಟೇಟಸ್ ಕತೆಗಳು (ಭಾಗ ೧೮೬) - ಮೋಡ

ಕಾಲೇಜಿನಿಂದ ಮನೆಗೆ ಹೊರಡಬೇಕಿತ್ತು. ಬೆಳಕಿರಬೇಕಾದ ಆಕಾಶದಲ್ಲಿ ಕಪ್ಪಗಿನ ಮೋಡಗಳು ಚಪ್ಪರ ಕಟ್ಟಿದ್ದವು. ಚಪ್ಪರದೊಳಗಿಂದ ಹನಿಗಳು ಯಾವಾಗ ಉದುರಬಹುದೋ ಎಂಬ ಭಯದಲ್ಲೆ ದಾರಿ ಕಾಯುತ್ತಿದ್ದೆ. ಮನೆಗೆ ಹೊರಡಲು ಗಾಡಿ ಹತ್ತುತ್ತಿದ್ದ ಕಾಲೇಜಿನ ವಾಚ್ ಮ್ಯಾನ್ ವಿಠಲಣ್ಣ "ಅರ್ಧದಾರಿವರೆಗೆ ನಾನೇ ಬಿಡ್ತೇನೆ ಬಾ "ಅಂದ್ರು. 

"ಬೇಡಪ್ಪ ಮಳೆ ಬರುವ ಹಾಗಿದೆ ಆಕಾಶ ನೋಡಿ" 

"ಇಲ್ಲಪ್ಪ ಈ ಮಳೆ ಕುಂದಾಪುರದಲ್ಲಿ ಇದೆ, ಹೆಚ್ಚೆಂದರೆ ಬ್ರಹ್ಮಾವರದವರೆಗೆ ಬಂದಿರಬಹುದು. ಉಡುಪಿಗೆ ಬರುವುದಿಲ್ಲ. ಒಂದು ಗಂಟೆ ನಂತರ ಜೋರು ಗಾಳಿ ಬೀಸಿದರೆ, ಮಳೆ ಹನಿಯಬಹುದು". 

"ಅವರ ಮಾತಿನ ನಂಬಿಕೆ ಮೇಲೆ ಗಾಡಿ ಹತ್ತಿದೆ. ನನ್ನ ಮನೆ ತಲುಪಿ ಗಂಟೆ ಒಂದಾದರೂ ಗಾಳಿ ಬೀಸಲಿಲ್ಲ ಮಳೆ ಹನಿಯಲಿಲ್ಲ. ಅದು ಅವರಿಗೆ ತಿಳಿದದ್ದು ಹೇಗೆ? ನನ್ನ ಗೆಳೆಯ ಹೇಳಿದ ಕುಂದಾಪುರದಲ್ಲಿ ಜೋರು ಮಳೆ ಆಗಿತ್ತಂತೆ. 

"ಅವತ್ತು ಮನೆಯ ಅಂಗಳದಲ್ಲಿ ಒಣಗಲು ಹಾಕಿದ ಬಟ್ಟೆ ಒಳ ತರಲು ಹೊರಗೋಡಿದೆ. ಮಳೆ ಬರುವ ಸೂಚನೆ ಇತ್ತು. ಅಮ್ಮ "ಬೇಡ ಮಳೆ ಬರುವುದಿಲ್ಲ "ಅಂದ್ರು. ಅವತ್ತು ಮಳೆ ಬರಲಿಲ್ಲ. ಹಿಂದೊಮ್ಮೆ ಅಜ್ಜಿ ಮನೆಯಲ್ಲಿ ಅಡಿಕೆ ರಾಶಿ ಮಾಡುತ್ತಿದ್ದರು "ಯಾವ ಕಾರಣಕ್ಕೆ ಅಡಿಕೆ ರಾಶಿ ಮಾಡ್ತಾ ಇದ್ದೀರಿ" ಮಳೆ ಬರೋದಿಲ್ಲ ಮೋಡ ಇಲ್ಲ ಅಂದೆ.

" ಬೆಳಗ್ಗೆಯಿಂದ ತುಂಬಾ ಸೆಕೆ ಆಗ್ತಾ ಇದೆ, ಇವತ್ತು ರಾತ್ರಿ ಮಳೆ ಬರುತ್ತೆ. ಹೌದು, ಮಳೆ ಬಂತು. ಮಳೆ ನೀರು ನಿಲ್ಲುತ್ತೆ ಅಂದ್ರೆ, ನಿಲ್ಲುತ್ತಿತ್ತು. ಮಳೆ ನಿಲ್ಲುವುದಿಲ್ಲ ಅಂದರೆ ನಿಲ್ಲೋದಿಲ್ಲ.  

ಇದನ್ನ ನಮ್ಮ ಹಿರಿಯರಿಗೆ ತಿಳಿದ ವಿಜ್ಞಾನ ನಮಗ್ಯಾಕೆ ತಿಳಿಲಿಲ್ಲ. ಅವರಿಗೆ ಮೋಡದೊಂದಿಗೆ ಬಾಂಧವ್ಯವಿತ್ತು, ಸಂವಹನವಿತ್ತು. ಅಂದರೆ ಪ್ರಕೃತಿಯೊಂದಿಗೆ ನಾವು ಒಂದಾದರೆ ಮುಂದಿನ ಕ್ಷಣದ ಅರಿವು ಸಿಗಬಹುದು. ನಾವು ದೂರ ಹೋಗಿಬಿಟ್ಟಿದ್ದೇವೆ... ಅಲ್ವಾ?

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ