ಸ್ಟೇಟಸ್ ಕತೆಗಳು (ಭಾಗ ೧೮೭) - ಕಾಡು

ಸ್ಟೇಟಸ್ ಕತೆಗಳು (ಭಾಗ ೧೮೭) - ಕಾಡು

ಕಾಡು ಮೌನವಹಿಸುವುದು ಬಿಟ್ಟು ಬೇರೆ ಏನೂ ಮಾಡುವ ಹಾಗಿರಲಿಲ್ಲ ಮರ ಕಡಿದು ಸಾಗಾಟವಾಗುತ್ತಿದೆ. ಕಾಡು ಬೆತ್ತಲೆಯಾಗುತ್ತಿದೆ. ಅಧಿಕಾರಿಗಳಿಗೆ ಕೊಡಲಿ ಹಿಡಿದಾಗ ಪ್ರಶ್ನಿಸುವವರು ಯಾರು? ಸರಕಾರಕ್ಕೆ ದೂರು ದಾಖಲಾಯಿತು ಅನಾಮಧೇಯರಿಂದ. ಈ ಸುದ್ದಿ ಹರಡುವುದಕ್ಕಿಂತ ಮೊದಲೇ ಹೊಸಸುದ್ದಿ ಹುಟ್ಟಬೇಕು. ಪ್ರಶಂಸಿಸುವ ಕೆಲಸವಾಗಬೇಕು. ಸರ್ಕಾರಿ ಅಧಿಕಾರಿಗಳ ಯೋಜನೆ ಸಿದ್ಧಗೊಂಡಿತು. ಅಧಿಕಾರಿಗಳ ಕಡೆಯಿಂದ ಕಾಳಿಂಗ ಹಾವಿನ ಮೊಟ್ಟೆಗಳಿಗೆ ಕೃತಕವಾಗಿ ಕಾವು ನೀಡಿ ಮರಿಗಳು ಜನಿಸುವಂತೆ ಮಾಡಿ ಕಾಡೊಳಗೆ ಹರಿಯಬಿಟ್ಟು ಪರಿಸರ ಜಾಗೃತಿಯ ಮನಸ್ಸುಗಳಿವೆ ಅನ್ನುವ ಸುದ್ದಿ ಪ್ರಕಟವಾಗುವಂತೆ ಮಾಡಿದರು. ಆದರೆ ಅರ್ಧ ಬೆತ್ತಲೆಯಾದ ಕಾಡು ಅಳುತ್ತಿದೆ. 

"ನನ್ನನ್ನ ಸಮತೋಲನದಲ್ಲಿ ಉಳಿಸಿಕೊಳ್ಳಲು ನನಗೆ ಗೊತ್ತಿದೆ, ನಿನ್ನ ಹಸ್ತಕ್ಷೇಪವೇ ನನ್ನ ನಾಶಕ್ಕೆ ಕಾರಣ.ನನ್ನ ಕಾಡಲ್ಲಿ ಜೀವಿಗಳು ಎಷ್ಟಿರಬೇಕು, ಯಾವ ಜೀವಿ ಬದುಕಬೇಕು, ಯಾವುದು ಸಾಯಬೇಕು, ಯಾವುದು ಯಾವುದರ ಆಹಾರವಾಗಬೇಕು, ಯಾವ ಮರ ಎತ್ತರಕ್ಕೆ ಏರಬೇಕು , ಯಾವುದು ಕಡಿದುರುಳಬೇಕು, ಹೂವು ಹಣ್ಣು ಎಲ್ಲವನ್ನ ನಿರ್ಧರಿಸೋದು ನಾನು. ನಿನ್ನ ಕೃತಕ ಆಲೋಚನೆಗಳು ನನ್ನ ಸರಪಳಿಯನ್ನು ಕತ್ತರಿಸಿ ನಾಶದ ಕಡೆಗೆ ಕೊಂಡೊಯ್ಯುತ್ತದೆ. ಬೇಡಿಕೊಳ್ಳುವುದಿಷ್ಟೆ.  ನಿನ್ನಿಂದ ನನ್ನನ್ನು ಹುಟ್ಟುಹಾಕುವುದ್ದಕ್ಕೆ ಸಾಧ್ಯವಿಲ್ಲ. ದಯಮಾಡಿ ನಾಶ ಮಾಡಬೇಡ. ಬಿಟ್ಟು ಬಿಡು ನನ್ನ ಪಾಡಿಗೆ. ನಾವು ನಿನ್ನನ್ನು ಉಳಿಸುತ್ತೇವೆ ..... ಕಾಡಿನ ಕೂಗಿಗೆ ಪ್ರತಿಕ್ರಿಯೆಯೂ ಇಲ್ಲ,ಪ್ರತಿಧ್ವನಿಯೂ ಇಲ್ಲ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ