ಸ್ಟೇಟಸ್ ಕತೆಗಳು (ಭಾಗ ೧೮೮) - ತ್ಯಾಗ
ವೇದಿಕೆ ಮೇಲಿನ ಜನಗಳು ಹೆಚ್ಚಿದ್ದರು. ಕುಳಿತವರೇ ಬೆರಳೆಣಿಕೆಯಷ್ಟು. ತ್ಯಾಗ ಜೀವಿಗಳಿಗೆ ಸನ್ಮಾನ. ಕಾರ್ಯಕ್ರಮದ ಬ್ಯಾನರ್ ಹಳತಾಗಿತ್ತು. ವರ್ಷವೂ ನಡೆಯುವ ಕಾರ್ಯಕ್ರಮವಾದ್ದರಿಂದ ದಿನಾಂಕವೊಂದು ಬದಲಾಗುತ್ತಿದೆ. ಕೆಳಗೆ ಕುಳಿತ ಜನರೇ ತ್ಯಾಗ ಜೀವಿಗಳು. ಪ್ರಸಿದ್ಧರಾದವರು, ಎಲೆಮರೆಯ ಕಾಯಿಗಳು, ಅವರನ್ನು ಗುರುತಿಸಿ ಗೌರವಿಸುವ ದಿನವೆಂದು ನಿಗದಿಯಾಗಿತ್ತು . ಹಾರ-ತುರಾಯಿ ಶಾಲುಗಳು ಜೋಡಿಸಲ್ಪಟ್ಟಿದ್ದವು. ಯಾಕಾಗಿ ಅದನ್ನು ನೀಡುತ್ತಾರೋ ಗೊತ್ತಿಲ್ಲ. ಪಡೆಯುವ ದಿನದಂದಿನ ಚಿತ್ರವೊಂದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ನಂತರ ಮನೆಯ ಕೋಣೆಯೊಂದರಲ್ಲಿ, ಗೋಡೆಯಲ್ಲಿ, ಯಾವುದೋ ಗೋಣಿಚೀಲದಲ್ಲಿ ತುಂಬಿ ಮಡಚಿ ಮರೆಯಾಗುತ್ತದೆ. ತ್ಯಾಗ ಜೀವಿಗಳನ್ನು ಗುರುತಿಸಲಾಯಿತು. ಹೊಗಳಿಕೆ, ಭಾಷಣಗಳು, ಚಪ್ಪಾಳೆ, ಪೇಟ ತೊಡಿಸಿ ಮನೆಗೆ ಕಳುಹಿಸಲಾಯಿತು. ಮನೆಗೆ ತಲುಪಿ ಹಾರ ಶಾಲುಗಳು ತಮ್ಮ ಗೆಳೆಯರೊಂದಿಗೆ ಮತ್ತೆ ಬರದಂತಹ ಜಾಗದಲ್ಲಿ ಜೋಡಣೆಯಾದವು. ತ್ಯಾಗ ಜೀವಿಗಳು ಅನ್ನಿಸಿಕೊಂಡವರು ಚಪ್ಪಾಳೆಯನ್ನು ಪಡೆದರು. ಭೇಷ್ ಅನ್ನಿಸಿಕೊಂಡರು. ಒಂದಷ್ಟು ಕಡೆ ಹೆಸರುಗಳು ಪ್ರಕಟವಾದವು. ಆದರೆ ಯಾರಿಗೂ ಕಾಣದೆ ಅವರ ತ್ಯಾಗದ ಹಿಂದೆ ಕನಸು ಪ್ರೀತಿ ಮತ್ತು ಗುರಿಗಳು ತಮ್ಮನ್ನ ತಾವು ಆತ್ಮಹತ್ಯೆಗೆ ಒಡ್ಡಿದ್ದವು. ತ್ಯಾಗ ನೋಡಲು ಸಣ್ಣ ಪದ. ಆದರೆ ಅದು ಬಯಸುವ ಬೆಲೆ ತುಂಬಾ ದೊಡ್ಡದು. ಸುದ್ದಿಗಳು ಪುಸ್ತಕದ ಒಳಗೆ ಸೇರಿ ಹೋಯಿತು ಆದರೆ ಅವರ ಕನಸು ಗುರಿಗಳು ಬಲಿಯಾದದ್ದು ಎಲ್ಲೂ ಕಾಣಲೇ ಇಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ