ಸ್ಟೇಟಸ್ ಕತೆಗಳು (ಭಾಗ ೧೯೧) - ಓಟ

ಸ್ಟೇಟಸ್ ಕತೆಗಳು (ಭಾಗ ೧೯೧) - ಓಟ

ನೂರು ಮೀಟರ್ ಓಟದ ಅಂಗಳ ತಯಾರಾಗಿತ್ತು. ಸ್ಪರ್ಧಿಗಳಾಗಿ ಇರೋರು ಎಲ್ಲರೂ ರಾಷ್ಟ್ರಮಟ್ಟದಲ್ಲಿ ಮಿಂಚಿದವರು. ದಿನವೂ ಅಭ್ಯಾಸ, ಗೆಲುವೊಂದೇ ಐಕ್ಯ ಮಂತ್ರ ಜಪಿಸಿ ಕಾಲಿನ ಸ್ನಾಯುಗಳನ್ನು ಬಿಗಿಗೊಳಿಸಿ ಓಟ ಮುಂದುವರೆಸಿದವರು. ವಿಶ್ವದಾಖಲೆಯ ಓಟದ ಸಮಯವನ್ನ ಗುರಿಯಾಗಿಸಿ ಉಸಿರು ಬಿಗಿಹಿಡಿದು ಓಡುವವರು. ಗೆರೆಯ ಆರಂಭದಲ್ಲಿ ಕುಳಿತ ಎಲ್ಲರ ದೃಷ್ಟಿ ಕೊನೆಯ ಅಂಚಿನ ರೇಖೆಯಲ್ಲಿ. ಗುಂಡಿನ ಶಬ್ಧಕ್ಕೆ ಮೊದಲ ಹೆಜ್ಜೆಗೆ ಬಲವೂರಿ ವೇಗ ಪಡೆಯಿತು. ವೇಗ ವೃದ್ಧಿಯಾಗಿದ್ದು ಗಾಳಿಯನ್ನ ದೇಹ ಸೀಳುತ್ತಿತ್ತು. ಕಾಲುಗಳಿಗೆ ನಂಬಿಕೆಯನ್ನು ತುಂಬಿ ಗುರಿಯ ಕಡೆಗೆ ದಾವಿಸಿದರು. ಎಲ್ಲರಿಗಿಂತ ಮೊದಲು ಗೆರೆ  ದಾಟಿದವ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಳು ಆದರೆ ಅವನು ಅಲ್ಲಿ ಚಿನ್ನ ಗೆದ್ದವನಲ್ಲ. ಪ್ರಶಸ್ತಿ ಸಮಾರಂಭದಲ್ಲಿ ಅವನ ಕೊರಳಿಗೆ ಚಿನ್ನದ ಪದಕವನ್ನರ್ಪಿಸಿ ಅತಿಥಿಗಳು ಮಾತನಾಡಿದರು " ನಮ್ಮೆಲ್ಲರ ನಿರೀಕ್ಷೆ ಹಿಂದಿನ ವರ್ಷದ ವಿಜಯಿಯ ಮೇಲೋ ಅಥವಾ  ರಾಷ್ಟ್ರಮಟ್ಟದಲ್ಲಿ ಚಿನ್ನವನ್ನು ಗೆದ್ದವನ ಮೇಲೆ ಇತ್ತು. ಆದರೆ ಇಂದಿನ ವಿಜಯಿ ಈ ಹೊಸ ಹುಡುಗ. ಎಲ್ಲರೂ ಅಸಮಾನ್ಯ ಓಟಗಾರರೇ, ಆದರೆ ಇವನು ಚೆನ್ನ ಗೆಲ್ಲಲು ಕಾರಣವೇನು ಗೊತ್ತಾ? ಎಲ್ಲರಿಗೂ ಗೆಲ್ಲುವ ಖಚಿತತೆ ಇತ್ತು. ಇವನಿಗೂ ಕೂಡ ಆದರೆ  ಸೋಲಿನ ಎಚ್ಚರವಿರಲಿಲ್ಲ. ಸೋಲಿನ ಎಚ್ಚರ ಹೊಂದಿದ್ದವ ಇವನು ಮಾತ್ರ. ಬರಿಯ ಗೆಲುವೊಂದೇ ಐಕ್ಯ ಮಂತ್ರವಾಗಬೇಕು, ಆದರೆ ಸೋಲಿನ ಎಚ್ಚರವಿದ್ದಾಗ ನಾವು ಜೀವಂತ ಸಾಧಕರಾಗುತ್ತೇವೆ" ಒಪ್ಪಿಗೆಯ ಕರತಾಡನ ಜೋರಾಗಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ