ಸ್ಟೇಟಸ್ ಕತೆಗಳು (ಭಾಗ ೧೯೩) - ನನ್ನ ದೃಷ್ಟಿ

ಸ್ಟೇಟಸ್ ಕತೆಗಳು (ಭಾಗ ೧೯೩) - ನನ್ನ ದೃಷ್ಟಿ

ಮೂರು ರಸ್ತೆ ಸೇರುವ ಜಾಗದ ಬಲಬದಿಯ ಎರಡನೇ ಅಂತಸ್ತಿನ ಕಟ್ಟಡದಲ್ಲಿ ನನ್ನ ಕೆಲಸ. ಕಿಟಕಿಯ ಪಕ್ಕದಲ್ಲಿ ನನ್ನ ಸ್ಥಳ ನಿಗದಿಯಾಗಿದ್ದರಿಂದ ನನ್ನ ಕೆಲಸಕ್ಕೆ ಮನಸ್ಸಿಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿದೆ. ಕಾರಣವೇನೆಂದರೆ ರಸ್ತೆ ಮತ್ತು ಅಲ್ಲಿ ಓಡಾಡುವ ಮನಸ್ಸುಗಳು. ಅವತ್ತು ಸೂರ್ಯನ ದಿನದ ಕೆಲಸ ಮುಗಿಸಲು ಇನ್ನೂ ಒಂದು ಗಂಟೆಯ ಸಮಯ ಇತ್ತು. ಆದರೆ ಮೋಡದ ಕಡೆಯಿಂದ ಕತ್ತಲು ಬೇಗ ರಂಗಪ್ರವೇಶವಾಗಿತ್ತು. ಕೆಲಸ ಇಲ್ಲದ ಕಾರಣ ಕಣ್ಣು ರಸ್ತೆಗೆ ಹಾಯಿಸಿದೆ ಅಲ್ಲಿ ಅವನು ನಿಂತಿದ್ದಾನೆ. ಕೈಯಲ್ಲಿ ಕೊಡೆ ಹಿಡಿದು ಹೆಗಲಿಗೊಂದು ಬ್ಯಾಗು ಏರಿಸಿ ಯಾರಿಗೂ ಕಾಯುತ್ತಿದ್ದಾನೆ. ಗಾಡಿಯನ್ನಲ್ಲ, ವ್ಯಕ್ತಿಯನ್ನು, ಅದು ಅವನ ಕಣ್ಣು ಹೇಳುತ್ತಲಿದೆ. ಅವನು ಕೊಟ್ಟ ಸಮಯಕ್ಕಿಂತ ಬೇಗ ಬಂದಿದ್ದಾನೆ ಅನ್ನೋದು ಅವನ ಚಡಪಡಿಕೆಯಲ್ಲಿ ಕಾಣುತ್ತಿದೆ. ಸಮಯವನ್ನ ಅರಿಯೋಕೆ ಅವನ ಕೈಯಲ್ಲಿ ಗಡಿಯಾರ ಇಲ್ಲ ತಲುಪಬೇಕಾದವರು ಎಲ್ಲಿದ್ದಾರೆ ಅನ್ನೋದನ್ನ ಕೇಳಿ ತಿಳಿಯೋಕೆ ಮೊಬೈಲ್ ಕೂಡ ಇಲ್ಲ ಅನ್ನಿಸುತ್ತೆ. ಮುಗ್ದತೆಯ ಮುಖವನ್ನ ಹೊತ್ತು ಕಾಯುತ್ತಿದ್ದಾನೆ. 

ಮೊದಲನೆಯ ಭೇಟಿಯಾಗೋ ತರದ ಉತ್ಸಾಹವಿದೆ. ಅದು ಹೌದು ಅದು ಗೊತ್ತಿಲ್ಲ ಏಕೆಂದರೆ ಜೋರು ಮಳೆಯ ಕಾರಣ ಛತ್ರಿ ಎತ್ತಿಹಿಡಿದು ನಿಂತಿದ್ದಾನೆ ಮೊದಲಿಗೆ ಕಾಣುತ್ತಿದ್ದ ಸ್ಫುಟತೆ ಮಳೆಯಿಂದಾಗಿ ನನಗೆ  ಆಗುತ್ತಿಲ್ಲ. ನಾವು ಹೋಗುವ ತಯಾರಿಯಲ್ಲಿ ಅಲ್ಲಿಗೆ ಬಂದಾಗ ಅವನು ಪರಾರಿಯಾಗಿದ್ದ. ತೆರಳಿದನೋ, ನೋವಿನಿಂದ ಮರಳಿದನೋ ಗೊತ್ತಿಲ್ಲ. ಆದರೆ ಅವನ ಕಣ್ಣುಗಳು ಯಾರನ್ನೂ ಕಾಯುತ್ತಿದ್ದವು ಬಂದು ಗೆಳೆಯನ ಗೆಳತಿಯೋ, ತಂಗಿಯೋ, ಹೆತ್ತವರೋ, ಸಾಲ ಕೇಳುವವರೋ, ಸಲಹೆ ನೀಡುವವರೋ, ಕೆಲಸ ಕಳೆದುಕೊಂಡವನೋ ಗೊತ್ತಿಲ್ಲ.

ಹೀಗೆ ಇದೆ ಅನ್ನೋದು. ಅವನ ದೃಷ್ಟಿಗಿಂತ ನಾನು ಕಂಡುಕೊಂಡದ್ದು ನಿಜವಾಗಿಯೂ ಇದು ನಡೆದಿದ್ದ ಹೀಗೂ ನಡೆದಿರುವುದಾ ಅನ್ನೋದರ ಅರಿವಿಲ್ಲ. ಅದು ನಾನು ಕಂಡುಕೊಂಡದ್ದು ಮಾತ್ರ ಅದನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ವಿಷಯ ಏನು ಅನ್ನೋದನ್ನ ಕೇಳಿ ತಿಳಿಯೋಕೆ ಅವನು ಸಿಗಲಿಲ್ಲ ಸಿಕ್ಕು ಮಾತನಾಡಿಸಿ ಮುಂದುವರೆಸುತ್ತೇವೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ