ಸ್ಟೇಟಸ್ ಕತೆಗಳು (ಭಾಗ ೧೯೯) - ಪ್ರತಿಫಲ
"ಸರ್ ನಾನು ತುಂಬಾ ಜನರಲ್ಲಿ ಕೇಳಿ ಉತ್ತರ ಸಿಗದೇ ಇರುವುದಕ್ಕೆ ನಿಮ್ಮ ಬಳಿ ಕೇಳ್ತಾ ಇರೋದು? ನನ್ನದೇ ವಯಸ್ಸಿನ ಅಥವಾ ಅದಕ್ಕಿಂತ ಸ್ವಲ್ಪ ಹಿರಿಯ ಅಥವಾ ಕಿರಿಯನಿರಬಹುದು ನಾವು ಒಂದೇ ಸಮಯದಲ್ಲಿ ಒಂದೇ ಕೆಲಸಕ್ಕೆ ಕೈ ಹಾಕುತ್ತೇವೆ. ಎಲ್ಲರಿಗೂ ಅದಕ್ಕೆ ಪ್ರತಿಫಲ ಸಿಗುತ್ತೆ ಆದರೆ ಅವರಿಗೆ ಸಿಕ್ಕಿರುವಷ್ಟು ನನಗೆ ಪ್ರತಿಫಲ ಸಿಗೋದಿಲ್ಲ. ಅದ್ಯಾಕೆ ಕಡಿಮೆಯಾಗುತ್ತಿದೆ".
"ನೋಡು ನಾನು ನಿನ್ನನ್ನ ಗಮನಿಸುತ್ತಾ ಇರುವುದಕ್ಕೆ ಈ ಮಾತನ್ನು ಹೇಳುತ್ತಿದ್ದೇನೆ, ಇದರಿಂದ ನಿನಗೆ ಅಂತಲ್ಲಾ ನಿನ್ನಂತ ಹಲವರಿಗೆ ಉಪಯೋಗವಾಗಬಹುದು, ಬೆಳಕಲ್ಲಿ ನಿಂತಾಗ ಗೋಡೆಯ ಮೇಲೆ ನಿನ್ನ ನೆರಳು ಬೀಳುತ್ತೆ ಆದರೆ ಹೆಚ್ಚು ಬೆಳಕಿದ್ದಾಗ ನೆರಳಿನ ಸ್ಪಷ್ಟತೆ ಮತ್ತು ನಿಖರತೆ ಹೆಚ್ಚಿರುತ್ತದೆ. ಬೆಳಕು ಕಡಿಮೆಯಾಗುತ್ತ ಹೋದಹಾಗೆ ನೆರಳೂ ಕಡಿಮೆಯಾಗುತ್ತ ಸಾಗುತ್ತದೆ. ನೆರಳು ಸದಾ ಇರುತ್ತೆ ಬೆಳಕಿಗೆ ಬಂದಾಗ ಮಾತ್ರ ಅದು ಕಾಣಸಿಗುತ್ತೆ. ಹಾಗೆಯೇ ನಿನ್ನ ಪರಿಶ್ರಮ ಹೆಚ್ಚು ಬೆಳಕಿರುವ ಕಡೆಗೆ ಸಾಗಿದ ತರಹ ಸಾಗಿದಾಗ ಮಾತ್ರ ನಿನ್ನ ಗೆಲುವಿನ ನೆರಳು ನಿಖರತೆಯಿಂದ ಮಿನುಗಲು ಸಾಧ್ಯ. ನಿನ್ನ ಹೆಜ್ಜೆಯನ್ನು ಕಡಿಮೆ ಬೆಳಕಿನಿಂದ ಹೆಚ್ಚು ಬೆಳಕಿನ ಕಡೆಗೆ ಸಾಗಿಸು ಉತ್ತರ ಸಿಗಬಹುದು, ಅನುಭವದೊಂದಿಗೆ ನನ್ನನ್ನು ಭೇಟಿಯಾಗು".
"ಸದ್ಯದ ಯೋಚನೆಗೆ ಹೊಸತೊಂದು ಇಂಬು ಸಿಕ್ಕಿತು, ಮುಂದುವರೆಯುತ್ತೇನೆ.... ಪರಿಹಾರ ಸಿಕ್ಕಿದ್ರೆ ಒಳಿತು ,ಇಲ್ಲದಿದ್ದರೆ ಇನ್ನೊಂದು ಪ್ರಯತ್ನ....."
-ಧೀರಜ್ ಬೆಳ್ಳಾರೆ
ಚಿತ್ರ: ಇಂಟರ್ನೆಟ್ ತಾಣ