ಸ್ಟೇಟಸ್ ಕತೆಗಳು (ಭಾಗ ೨೦೦) - ಪ್ರಶ್ನೆ
ಗಣೇಶ ಅವತ್ತು ನನ್ನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಂತು ನುಡಿಸಿದ ಕಾರಣ ಕಾಲೇಜಿನಲ್ಲಿ ಮೊದಲ ಬಾರಿಗೆ ಗಣೇಶನ ಪ್ರತಿಷ್ಠಾಪನೆಯಾಯಿತು. ಬೆಳಗಿನ ಹೊತ್ತು ಭಜನೆ ಪೂಜೆಯಾದ ನಂತರದಲ್ಲಿ ರಾತ್ರಿ ಗಣೇಶ ಒಬ್ಬಂಟಿ. ಅವನ ಜೊತೆ ಯಾರದರೂ ಇರಲೇಬೇಕು. ಅದಕ್ಕೆ ನಾನು ಕುಳಿತಿದ್ದೆ. ಒಂದಿಷ್ಟು ಬೆಳಕಿನ ವಿನ್ಯಾಸ ಇತ್ತು, ಕತ್ತಲೆಯೂ ಜೊತೆ ಸೇರಿತ್ತು. ಎರಡರ ಮಿಶ್ರಣದಲ್ಲಿ ಮನಸ್ಸಿಗೆ ಮೂಡಿದ ಪ್ರಶ್ನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸ್ತು. ನಾನು ಎಲ್ಲಿ ನಿಂತು ಗಮನಿಸಿದರೆ ಒಳ್ಳೆಯದು. ಕತ್ತಲಿನಿಂದ ಬೆಳಕನ್ನು ಗಮನಿಸಬೇಕೋ? ಆಗ ಬೆಳಕಿನಲ್ಲಿ ಇರೋರಿಗೆ ನಾನು ಕಾಣಿಸುವುದಿಲ್ಲ, ನನಗೆ ಎಲ್ಲವೂ ದರ್ಶನವಾಗುತ್ತದೆ. ಅಥವಾ ನಾನು ಬೆಳಕಿನಲ್ಲಿ ನಿಂತು ಕತ್ತಲನ್ನು ಗಮನಿಸಬೇಕಾ? ಆಗ ನಾನು ಬೇರೆಯವರಿಗೆ ಕಾಣುತ್ತಿದ್ದೇನೆ ಅನ್ನುವ ಭಯವಿರುತ್ತದೆ ನನಗೆ ಏನೂ ಕಾಣುವುದಿಲ್ಲ ಅನ್ನುವ ಯೋಚನೆ ಕೂಡ ಇರುತ್ತೆ. ನಾನು ಬೆಳಕಿನಲ್ಲಿ ನಿಂತು ಬೆಳಕಿನಲ್ಲಿರುವುದನ್ನು ಗಮನಿಸಬೇಕಾ? ಆಗ ನಾನು ಕಾಣುತ್ತೇನೆ ನನಗೂ ಕಾಣಿಸ್ತಾ ಇರುತ್ತೆ. ಅಲ್ಲಿ ಮುಚ್ಚುಮರೆ ಇರುವುದಿಲ್ಲ. ಅಥವಾ ಕತ್ತಲಲ್ಲಿ ಇದ್ದು ಕತ್ತಲನ್ನೇ ಗಮನಿಸಬೇಕಾ? ಕತ್ತಲಲ್ಲಿ ಏನು ಕಾಣದೆ ಸುಮ್ಮನೆ ಊಹಿಸಿಕೊಳ್ಳುತ್ತಾ ಜೀವಿಸಬೇಕು. ಇಷ್ಟು ಕಡೆಗಳಲ್ಲಿ ನಾನು ನಾನಾಗಿರುವ ಸಮಯ ಯಾವುದು?, ಯಾವುದರಲ್ಲಿ ನಾನಿದ್ರೆ ಒಳ್ಳೆಯದು? ಅಥವಾ ಸದ್ಯದ ಪರಿಸ್ಥಿತಿಯಲ್ಲಿ ಮನುಷ್ಯನಾದವನು ಯಾವ ಸ್ಥಳದಲ್ಲಿ ನಿಂತು ನೋಡಬೇಕು? ಅನ್ನೋದನ್ನ ನೀವೀಗ ತಿಳಿಸಬೇಕು. ಪ್ರಶ್ನೆಯೊಂದನ್ನು ಉತ್ತರಕ್ಕಾಗಿ ನಿಮ್ಮ ಮುಂದೆ ಇರಿಸಿದ್ದೇನೆ .ನಿಮ್ಮ ಮನಸ್ಸಿನೊಳಗೆ ನಮ್ಮ ಗಣೇಶ ಬಂದು ನಿಂತು ಇದಕ್ಕೊಂದು ಉತ್ತರ ಕೊಡಿಸುತ್ತಾನೆ ಎಂದು ನಂಬಿದ್ದೇನೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ