ಸ್ಟೇಟಸ್ ಕತೆಗಳು (ಭಾಗ ೨೦೨) - ಕೊರಡು

ಸ್ಟೇಟಸ್ ಕತೆಗಳು (ಭಾಗ ೨೦೨) - ಕೊರಡು

ಆ ಸರಕಾರಿ ಭವನದ ಮುಂದಿನ ರಸ್ತೆಯ ಭಾವನೆಗಳೇ ಸತ್ತು ಹೋಗಿದೆ. ಹೋರಾಟದ ಮನಸ್ಸಿರುವ ಹತ್ತು ಮುಖಗಳು, ಜೊತೆ ಕಾರಣವಿಲ್ಲದ ಜೊತೆಗೂಡಿದ ನೂರಾರು ಮುಖಗಳು ದಿಕ್ಕಾರ ಕೂಗುವುದು ಕಂಡು, ಹೋರಾಟಕ್ಕೆಂದು ಬಂದು ತಿಂಗಳು ಕಳೆದರೂ ಕಾದು ಸೋತು ಬಸವಳಿದು ಹೊರಟ ದಯನೀಯ ದೇಹವನ್ನು ಕಂಡು, ಮನಸ್ಸಿಲ್ಲದಿದ್ದರೂ ಮೇಲಾಧಿಕಾರಿಯ ಆಜ್ಞೆಗೆ ಲಾಠಿ ಬೀಸುವ ಖಾಕಿ ಕಾಲುಗಳನ್ನು ನೋಡಿ, ಪಿಂಚಣಿಗೆ ಸತಾಯಿಸಿ ಮತ್ತೆ ಮತ್ತೆ ಅದೇ ದಾರಿಯಲ್ಲಿ ನಡೆದ ಅಜ್ಜನ ಪಾದದ ಗಾಯವ ಕಂಡು, ದುಡ್ಡಿನ ವ್ಯಕ್ತಿಯ ರಾಜಮರ್ಯಾದೆಗೆ ಹಪಹಪಿಸುವ ಜೊಲ್ಲುಗಳನ್ನು ಕಂಡು, ರಾಷ್ಟ್ರೀಯ ಹಬ್ಬಗಳಿಗೆ ಮನಸ್ಸಿಲ್ಲದಿದ್ದರೂ ನಿಂತ ಜನನಾಯಕರ ಭಾಷಣಗಳ ಕೇಳಿ, ನ್ಯಾಯ ಮರೆತು ಅನ್ಯಾಯ ಓಡಾಡ್ಡಿದ್ದನ್ನು ಅನುಭವಿಸಿ, ತಪ್ಪುಗಳಾಗಿದ್ದು ಗೊತ್ತಿದ್ದರೂ ವಿಚಾರಣೆಗೆ ಓಡಾಡಿದ ಗಾಡಿಯ ಚಕ್ರಗಳ ತಿರುಗುವಿಕೆಗೆ, ಹಲವು ಅನಿಷ್ಟಗಳ ನಡುವೆ ಮಿನುಗಿದ ಕೆಲವು ಒಳಿತಿನ ಬೆಳಕನ್ನು ಕಂಡು ರಸ್ತೆ ನಾಚಿ ತನ್ನನ್ನು ಕಿತ್ತುಕೊಂಡು ನೋವನ್ನು ಪಟ್ಟಿತ್ತು. ಮತ್ತೆ ಮತ್ತೆ ಜೋಡಿಸಲು ಬಂದ ರೋಡ್ ರೋಲರ್ ಗಳನ್ನು ಘರ್ಷಣೆಯನ್ನು ಕಂಡು ರಸ್ತೆ ತಟಸ್ಥವಾಗಿ ಬಿಟ್ಟಿದೆ. ಮರದ ಹೂವು ಎಲೆಯ ಮೃದು ಸ್ಪರ್ಶ, ಗಾಳಿಯ ತಣ್ಣನೆಯ ನಾದವನ್ನು ಅನುಭವಿಸಲಾಗದ ಗಟ್ಟಿಕೊಂಡಿದೆ. ಕೋರಡಾಗಿದೆ... ಒಳಗಿರುವ ಮನಸ್ಸುಗಳ ತರಹ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ