ಸ್ಟೇಟಸ್ ಕತೆಗಳು (ಭಾಗ ೨೦೪) - ನಾಯಿ ಮರಿ

ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗುತ್ತಿದೆ. ನಾನು ಸೇರಬೇಕಾದ ವಿಳಾಸವೇ ನನಗೆ ಗೊತ್ತಾಗದ ಕಾರಣ ಅದನ್ನು ಅವಲಂಬಿಸಿದ್ದೆ. ಕಾಡಿನ ನಡುವಿನ ರಸ್ತೆಗೆ ಗಾಡಿಯನ್ನು ಕರೆದೊಯ್ದಿತ್ತು ಗೂಗಲ್ ಮ್ಯಾಪ್. ಅಲ್ಲಿ ಮನುಷ್ಯರ ಸುಳಿವೇ ಇಲ್ಲ ಇನ್ನು ದೊಡ್ಡ ಅಂತಸ್ತಿನ ಕಟ್ಟಡ ಇರೋಕೆ ಹೇಗೆ ಸಾಧ್ಯ? ಎಂದು ಗಾಡಿ ತಿರುಗಿಸಿದಾಗಲೇ ಎರಡು ನಾಯಿಮರಿಗಳು ಕಂಡದ್ದು. ರಾತ್ರಿ ಇಡೀ ಜೋರು ಮಳೆ ಬಿದ್ದಿತ್ತು ಅನ್ನೋದಕ್ಕೆ ಒದ್ದೆಯಾಗಿ ನಡುಗುತ್ತಿದ್ದ ನಾಯಿಗಳೇ ಸಾಕ್ಷಿ. ಸಣ್ಣ ಪ್ರಾಯವಾದ್ದರಿಂದ ಬುದ್ಧಿ ಇನ್ನೂ ಬೆಳೆದಿರಲಿಲ್ಲ. ನಾಯಿ ಇದೆ ಎಚ್ಚರಿಕೆ ಎಂದು ಬೋರ್ಡ್ ಹಾಕಿದ ಮಹಾನುಭಾವರು ಯಾರೋ ಮರಿಗಳನ್ನು ಯಾಕೆ ಸಾಕುವುದು ಎಂದು ಅದನ್ನ ಬೀದೀಲಿ ಬಿಟ್ಟು ಹೋಗಿರಬೇಕು. ನನ್ನಲ್ಲಿದ್ದ ಚೂರು ಬಿಸ್ಕೆಟ್ ಅನ್ನ ನಾಯಿಗೆ ನೀಡಿ ಹೊರಟೆ. ಅದರ ಕಣ್ಣುಗಳು ನನ್ನನ್ನು ನೋಡಿ ಪ್ರಶ್ನಿಸುತ್ತಿದ್ದವು." ಹುಟ್ಟಿದ್ದು ನಮ್ಮ ತಪ್ಪಲ್ಲ, ಬಿಟ್ಟು ಹೋದವನ ಮನೆಯಲ್ಲಿ ಹುಟ್ಟಿದ ನಮ್ಮ ತಪ್ಪು. ನಿಮ್ಮ ಹಾಗೆ ನಮಗೆ ಮಾತನಾಡಿ ಬೇಡಿ ತಿನ್ನೋಕು ಬರೋದಿಲ್ಲ, ದುಡಿದು ತಿನ್ನೋಕು ಗೊತ್ತಿಲ್ಲ. ನೀವು ಬೀದಿಲಿ ಬಿದ್ದಿದ್ದರೆ ನಿಮಗೆ ಅರಿವಾಗುತ್ತಿತ್ತು". ನಾನು ಸರಿದಾರಿ ತಲುಪಿದಾಗ ಮತ್ತದೇ ನೋಟದ ಪ್ರಶ್ನೆಗಳು ಕಾಡುತ್ತಿದ್ದವು. ನಾ ದಾರಿ ತಲುಪಿದರು ಆ ಮರಿಗಳಿಗೆ ದಿಕ್ಕಿರಲಿಲ್ಲ. "ಅನ್ನ ನೀಡದ ನಾವು ಶಿಕ್ಷಣ ಪಡೆದು ಏನು ಪ್ರಯೋಜನ?", ಇದು ನಾಯಿಮರಿ ಬಿಟ್ಟವನಿಗೆ ಮತ್ತು ಒಂದು ಬಿಸ್ಕೆಟ್ ನೀಡಿ ಹೊರಟು ಬಂದ ನನಗೆ ಅನ್ವಯವಾಗುತ್ತದೆ ಅಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ