ಸ್ಟೇಟಸ್ ಕತೆಗಳು (ಭಾಗ ೨೧೨) - ನಿರಾಕಾರ
ಕಾರಣವೇ ಇಲ್ಲದೆ ನಿರಾಕಾರವನ್ನು ಯೋಚಿಸಿದೆ. ನಿರಾಕಾರನು ನನ್ನ ಬಳಿ ಮಾತನಾಡಲು ಸಮಯ ಹೊಂದಿಸಿ ಕೊಂಡಿದ್ದಾನೆ ಅಂತ ಕಾಣುತ್ತದೆ. ನನ್ನ ಮುಂದೆ ಹಚ್ಚಿದ ಹಣತೆಯ ಕಿರು ಕಂಪನವೇ ನನ್ನ ಬಳಿ ಮಾತಿಗಿಳಿಯಿತು ಅನ್ನುವಂತೆ ಪಿಸು ಮಾತು ಕೇಳಿಬಂತು. " ನೋಡು ಮಗ, ನಿಮ್ಮ ಹಿರಿಯರಲ್ಲಿ ಒಂದು ಸಂಪ್ರದಾಯವಿದೆ. ಹಿಂದೆ ಅಂತಲ್ಲ ಈಗಲೂ ಇದೆ. ಯಾವುದೇ ಶುಭ ಸಂದರ್ಭಕ್ಕೆ ಬೇಕಾದ ಎಲ್ಲ ವಸ್ತುಗಳು ನಿನ್ನ ಮನೆಯಲ್ಲಿ ಇರೋದಿಲ್ಲ. ಹಾಗೆ ಬೇರೆಯವರ ಮನೆಯಿಂದಲೋ ಅಥವಾ ಅಂಗಡಿಯಿಂದಲೋ ಬಾಡಿಗೆ ತರುತ್ತೀಯಾ. ಹಾಗೆ ತಂದದ್ದನ್ನು ಬಳಸಿ ಮತ್ತೆ ಮೊದಲಿದ್ದ ಸ್ಥಿತಿಯಲ್ಲಿಯೇ ವಾಪಾಸು ಮಾಡಿದ್ದೀಯಾ ಅಲ್ವಾ? ಇಲ್ಲವಾದರೆ ಆ ಮನೆಯವನು ಅಥವಾ ಅಂಗಡಿಯವನು ನಿನಗೆ ಸಾಮಾನು ಬಿಟ್ಟು ಹಣದ ಬೇಡಿಕೆ ಇಡಬಹುದು, ನಿನ್ನೊಂದಿಗೆ ಮಾತು ಬಿಡಬಹುದು ಅಲ್ವಾ. ನಿಮ್ಮಂತ ಮಾನವರ ನಡುವಿನ ಕೊಡುಕೊಳ್ಳುವಿಕೆಯೇ ಇಷ್ಟು ನಿಷ್ಟುರವಾಗಿ ಇರುವಾಗ, ನಾನು ಯಥೇಚ್ಛವಾಗಿ ಯಾವುದೇ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿನಗೆ ನೀಡಿದ್ದೇನೆ. ನಾನು ಕೊಟ್ಟದ್ದನ್ನು ಹಾಗೆಯೇ ಹಿಂತಿರುಗಿಸಿ ಹೊರಡು. ನಿನ್ನ ಯೋಚನೆ, ಯೋಜನೆಗಳಿಂದ ಅದನ್ನು ಚಿತ್ರವಿಚಿತ್ರವಾಗಿ ನನಗೆ ಪರಿಚಯವೇ ಸಿಗದ ಹಾಗೆ ಹಾಳುಗೆಡವಿ ಹೊರಟುಬಿಟ್ಟರೆ ಹೇಗೆ? ನಿನಗೆ ಕನಿಷ್ಟ ಪ್ರಜ್ಞೆಯೂ ಇಲ್ಲವಲ್ಲ. ಬೆಟ್ಟ ಬೆಟ್ಟವಾಗಿರಲಿ, ನದಿ, ಗದ್ದೆ, ಕಾಡು, ಗಾಳಿ, ನೀರು, ಬೆಳಕು, ಎಲ್ಲವೂ ಹಾಗೆಯೇ ಉಳಿಯಲಿ. ಬದಲಾಯಿಸಿ ಹೊರಡಬೇಡ. ಹೀಗೆ ಗುರುತಿಲ್ಲದೆ ನೀ ನಡೆದರೆ ಮತ್ತೆ ಎಲ್ಲವನ್ನು ಅಳಿಸಿ ಹೊಸ ಸೃಷ್ಟಿಯನ್ನು ಆರಂಭಿಸಬೇಕಾದೀತು ಎಚ್ಚರ. ದೀಪ ಜೋರಾಗಿ ಉರಿದು ಆರಿಹೋಯಿತು… ಮುಂದೇನು....?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ