ಸ್ಟೇಟಸ್ ಕತೆಗಳು (ಭಾಗ ೨೧೪) - ಗ್ರೈಂಡರ್
ಮದುವೆ ಮನೆಯಲ್ಲಿ ಸಾಂಬಾರಿಗೆ ಮೆಣಸು ರುಬ್ಬುತ್ತಿದ್ದೆ. ಆಗ ಗ್ರೈಂಡರ್ ಮಾತಾಡಿತು." ಹಲೋ ಬಾಸ್ ಜೀವನ ಪಾಠ ಮಾಡೋರು ಯಾರೂ ಯಾಕೆ ಸಿಗ್ತಾ ಇಲ್ಲಾ? ಅಂತ ಕೇಳ್ತಾ ಇದ್ಯಲ್ಲ ನೀನು". ನನ್ನ ಆಲೋಚನೆ ಗ್ರೈಂಡರಿಗೆ ತಿಳಿದದ್ದು ಹೇಗೆ ಅನ್ನೋದು ನಂಗೂ ಗೊತ್ತಾಗ್ಲಿಲ್ಲ . "ಹೇಳಬೇಕಾಗಿರುವುದನ್ನು ನಾನು ಹೇಳುತ್ತೇನೆ ಕೇಳು, ನನ್ನ ನೋಡು ರುಬ್ಬ ಬೇಕಾಗಿರುವ ಎಲ್ಲವನ್ನು ನನ್ನೊಳಗೆ ಹಾಕಿ ನೀರು ಬೆರೆಸಿ ತಿರುಗಿಸಲು ಆರಂಭಿಸಿದರೆ ಯಾವುದೂ ರುಬ್ಬುವುದಿಲ್ಲ. ಅದರಿಂದ ಅಂತಿಮ ಫಲವು ಸಿಗುವುದಿಲ್ಲ. ನನ್ನೊಳಗೆ ಸಣ್ಣ ಹಲಗೆಯೊಂದನ್ನು ಇಟ್ಟಿರುತ್ತಾರೆ. ಅದು ನೇರವಾಗಿ ಚಲಿಸುತ್ತಿರುವ ಪದಾರ್ಥಗಳನ್ನು ತಡೆದು ನಿಲ್ಲಿಸಿ ಮತ್ತೆ ಮಿಶ್ರಣವಾಗಲು ಕಲ್ಲಿನೊಳಗೆ ತಲುಪುವಂತೆ ಮಾಡುತ್ತದೆ. ಹಾಗೆಯೇ ನಿನ್ನ ಜೀವನ ಬರಿಯ ನೇರವಾದ ದಾರಿ ಇದ್ದರೆ ವಿಶೇಷ ಅನುಭೂತಿ ಸಿಗುವುದಿಲ್ಲ. ಅಡೆತಡೆಗಳು ನಿರಂತರವಾಗಿ ಇದ್ದು ನೀನು ಅದನ್ನು ರೂಪಿಸಿಕೊಂಡು ಮುಂದುವರೆದಾಗ ನಿನ್ನೊಳಗೊಂದು ಧೀ ಶಕ್ತಿ ಬೆಳಗುತ್ತದೆ. ಜಗತ್ತು ತಿರುಗಿ ನೋಡುತ್ತದೆ. ಹೆಚ್ಚು ರುಬ್ಬಿಸಿಕೊಂಡಷ್ಟು ಸತ್ವಯುತವಾದದ್ದು ಹೊರಗೆ ಬರುತ್ತದೆ. ಹಾಗೆಯೇ ಜೀವನವು ಕೂಡ ಅಡೆತಡೆಗಳನ್ನ ಹೊಂದಿರುವುದು ಅಗತ್ಯ. ನನ್ನ ಜೀವನ ನಿನ್ನ ಕಥೆಗೆ ಹೀಗೆ ಹೊಂದಾಣಿಕೆಯಾಗುತ್ತದೆ. ಇನ್ನೂ ಬೇರೆಯವರೊಂದಿಗೆ ಮಾತನಾಡಬೇಕಾದರೆ ಸಂಪರ್ಕಿಸು ತಿಳಿಸುತ್ತೇನೆ " ರುಬ್ಬುವ ಕೆಲಸ ಪೂರ್ತಿಯಾಗಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ