ಸ್ಟೇಟಸ್ ಕತೆಗಳು (ಭಾಗ ೨೧೯) - ಯಾವುದು ಸರಿ?

ಸ್ಟೇಟಸ್ ಕತೆಗಳು (ಭಾಗ ೨೧೯) - ಯಾವುದು ಸರಿ?

ನನಗೆ ನನ್ನ ಮಾತು ಸರಿ ಅನಿಸಿದರೆ ನೇರ ವಾದಕ್ಕೆ ಇಳಿಯುತ್ತೇನೆ. ತಪ್ಪಿದ್ದರೆ ಒಪ್ಪಿಕೊಳ್ಳುತ್ತೇನೆ, ಇಲ್ಲವಾದರೆ ನನ್ನ ಮಾತನ್ನು ಎದುರಾಳಿ ಒಪ್ಪಿಕೊಳ್ಳುವವರೆಗೆ ವಾದ ಮಂಡಿಸುತ್ತೇನೆ. ಇವತ್ತು ನಾನು ಮತ್ತು ನನ್ನ ಗೆಳೆಯ ವಿನೋದ ಮಾತನಾಡುತ್ತಿರುವಾಗ ಒಂದು ವಾಕ್ಯದ ಬಗ್ಗೆ ವಾದ ಆರಂಭವಾಯಿತು. ದಕ್ಷಿಣ ಭಾರತ ಅನ್ನುವ ವಾಕ್ಯ ಸರಿಯಾ ಅಥವಾ ಭಾರತದ ದಕ್ಷಿಣ ಅನ್ನೋದು ಸರಿಯಾ? ಅಂತ. ಅವನ ಪ್ರಕಾರ ದಕ್ಷಿಣ ಭಾರತವೇ ಸರಿ. ದಿಕ್ಕಿನಿಂದ ಭಾರತವನ್ನು ಗುರುತಿಸಲಾಗುತ್ತದೆ ಎಂದು ಹೇಳಿದ. 

ನಾನಂದೆ ಇಲ್ಲ, ದಕ್ಷಿಣ ಭಾರತ ಇದು ವಿಭಾಗದ ಸೂಚನೆ. ಭಾರತವನ್ನು ವಿಂಗಡಿಸುತ್ತದೆ. ಪ್ರತ್ಯೇಕತೆಯನ್ನು ಪ್ರೇರೇಪಿಸುತ್ತದೆ. ಭಾರತದ ದಕ್ಷಿಣ ಇದು ನಮ್ಮೊಳಗೆ ಏಕತೆಯನ್ನು ಉಂಟುಮಾಡುತ್ತದೆ. ನಾವೆಲ್ಲರೂ ಒಂದು ಅನ್ನೋದನ್ನ ಮತ್ತೆ ಮತ್ತೆ ಎಚ್ಚರಿಸುತ್ತದೆ . "ದಕ್ಷಿಣ ಭಾರತದಲ್ಲಿ" ಸಂಕುಚಿತ ಮನೋಭಾವವಿದೆ, "ಭಾರತದ ದಕ್ಷಿಣದಲ್ಲಿ" ವಿಶಾಲತೆಯು ಕಂಡುಬರುತ್ತದೆ. 

ನಮ್ಮ ಅಖಂಡವಾದ ಭಾರತದಲ್ಲಿ ದಕ್ಷಿಣದ ಒಂದು ಜಾಗ ಅನ್ನೋದು "ಭಾರತ ದಕ್ಷಿಣದ" ಸೂಚ್ಯವಾಗಿರುತ್ತದೆ. ಇದು ನನ್ನ ಅಭಿಪ್ರಾಯ. ನಿಮ್ಮ ಪ್ರಕಾರ ಇದರಲ್ಲಿ ಯಾವುದು ಸರಿ! ಉತ್ತರಿಸಿ. ಮತ್ತೊಂದು ವಾದ ಹುಟ್ಟಲಿ ಇನ್ನೊಂದು ಹೊಸ ಅರ್ಥ ದೊರೆತರೆ ನಮಗೆ ಒಳ್ಳೇದಲ್ವಾ ?...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ