ಸ್ಟೇಟಸ್ ಕತೆಗಳು (ಭಾಗ ೨೨೨) - ಬಿಂಬದ ಮಾತು
ವಿದ್ಯುತ್ ಬಲ್ಬು ತಾನು ಉರಿಯಬೇಕೋ, ಆರಬೇಕೋ ಅನ್ನುವ ಗೊಂದಲದಲ್ಲಿ ನೇತಾಡುತ್ತಿದೆ. ಮಂದಬೆಳಕಿನ ಪುಟ್ಟ ಕೋಣೆಯಲ್ಲಿ ಆತ ಕನ್ನಡಿ ಮುಂದೆ ನಿಂತಿದ್ದಾನೆ. ಇವನೊಳಗಿನ ಅವನಿಗೂ, ಕನ್ನಡಿಯೊಳಗಿನ ಇವನಿಗೂ ಮಾತುಕತೆ ಆರಂಭವಾಯಿತು. "ಪ್ರಸ್ತುತ ಕಾಲಘಟ್ಟದಲ್ಲಿ ನಾವು ಸಾಧಿಸೋಕೆ ನಮ್ಮ ಹಿನ್ನೆಲೆಗಳು ಕಾರಣವಾಗುತ್ತದೆ. ನಮ್ಮ ಕೈಯಲ್ಲಿನ ದುಡ್ಡು, ನಾವು ಪಡೆದುಕೊಂಡ ವಿದ್ಯೆ,ನಾವು ಹೋಗುತ್ತಿರುವ ದಾರಿ, ಇದೆಲ್ಲ ಸೇರಿದಾಗ ನಮ್ಮ ಸಾಧನೆ ಸಾಧ್ಯವಾಗುತ್ತದೆ " ಇದು ಇವನೊಳಗಿನ ಅವನ ಮಾತು. ಆದರೆ ಬಿಂಬದೊಳಗಿನ ಇವನ ವಾದವೇನೆಂದರೆ "ಇದನ್ನು ನೇರವಾಗಿ ತಿರಸ್ಕರಿಸುತ್ತೇನೆ. ಸಾಧನೆಗೆ ಯಾವುದೂ ಕಾರಣ ಅಲ್ಲ. ಅದಕ್ಕೂ ಸಾಧನೆಗೂ ಸಂಬಂಧ ಇಲ್ಲ. ಹಸಿವು, ನೀರಡಿಕೆ, ನಿದ್ದೆ, ಇವೆಲ್ಲವೂ ನಿನ್ನ ಪರಂಪರೆ, ಹಿನ್ನೆಲೆ, ದುಡ್ಡು, ವಿದ್ಯೆ, ಇದ್ಯಾವುದರಿಂದಲೂ ಬರುವುದಿಲ್ಲ. ಕಾಲಕಾಲಕ್ಕೆ ಘಟಿಸುತ್ತದೆ. ನೀನು ಅದನ್ನ ಅನುಭವಿಸಿದ್ದೀಯಾ. ಹಾಗೆಯೇ ನಿನಗೆ ಏನಾದರೂ ಮಾಡಬೇಕೆಂಬ ಮನಸ್ಸು ಇದ್ದರೆ ಯಾವುದರ ಅವಶ್ಯಕತೆಯೂ ಇಲ್ಲದೆ ನಿನ್ನ ದಾರಿ ನೀ ಕಂಡುಕೊಂಡು ಸಾಗಬಹುದು. ಹಿನ್ನೆಲೆ, ಪರಂಪರೆ, ಹಣಕಾಸುಗಳು ನಿನ್ನ ಸಾಧನೆಗೆ ನೆರವಾಗುತ್ತವೆ ಅನ್ನೋದಾದರೆ ಅದು ನಿನ್ನ ಸಾಧನೆ ಅಲ್ಲ. ನಿನಗೆ ಸಿಕ್ಕ ಬಿಕ್ಷೆ . ಅದನ್ನು ನೆನಪಿಟ್ಟುಕೋ". ಇವನೊಳಗಿನ ಅವನ ಮಾತು "ದೊಡ್ಡ ಮಾತಾಡ್ತೀಯಾ, ಆದರೆ ಇದು ಸದ್ಯದ ಜೀವನಕ್ಕೆ ಹೊಂದೋದಿಲ್ಲ ಅಲ್ವಾ? ನೀನು ಸಾಧಿಸಿದೆ ಅನ್ನೋದೆ ಮುಖ್ಯ. ಹೇಗೆ ಅನ್ನೋದನ್ನ ಯಾರು ಕೇಳೋದಿಲ್ಲ."
ದೀಪ ಉರಿಯ ಬೇಕೆನ್ನುವಷ್ಟರಲ್ಲಿಯೇ ಆರಿಹೋಯಿತು. ಕನ್ನಡಿಯೊಳಗಿನ ಇವನು ಮಾಯವಾದ. ಯಾಕೆ ಮಾಯವಾದನೋ ಗೊತ್ತಿಲ್ಲ. ಮತ್ತೊಮ್ಮೆ ಬೆಳಕು ಬರುವವರೆಗೆ ಕಾಯಬೇಕು. ಅಥವಾ ಬೆಳಕನ್ನ ನಾವೇ ಸೃಷ್ಟಿಸಿಕೊಳ್ಳಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ