ಸ್ಟೇಟಸ್ ಕತೆಗಳು (ಭಾಗ ೨೨೩) - ಬೆಳಕಿನ ಪಾಠ

ಸ್ಟೇಟಸ್ ಕತೆಗಳು (ಭಾಗ ೨೨೩) - ಬೆಳಕಿನ ಪಾಠ

ಕಾಲೇಜಿನ ಮುಂಭಾಗದಲ್ಲಿ ನಿಂತಿದ್ದೆ. ಅವತ್ತು ಮನೆಗೆ ತೆರಳುವ ಅವಸರವೇನೂ ಇರಲಿಲ್ಲ. ನಮ್ಮ ಕಾಲೇಜಿನ ಮುಂಭಾಗದ ಮನೆಯಲ್ಲೊಂದು ಮದುರಂಗಿ ಶಾಸ್ತ್ರ. ಅದಕ್ಕೆ ಹಾಕಿದ ಬೆಳಕಿನ ವಿನ್ಯಾಸವನ್ನು ಗಮನಿಸುತ್ತಾ ನಿಂತಿದ್ದೆ. ಏನೇನು ಚಲನೆಗಳು. ಹಲವು ಬಣ್ಣಗಳು ಮನಸ್ಸಿಗೊಪ್ಪುವಂತೆ ಚಿತ್ತಾಕರ್ಷಕವಾಗಿ ಚಲಿಸುತ್ತಿದೆ. ಒಂದು ಏರಿದರೆ ಇನ್ನೊಂದು ಇಳಿಯುತ್ತಿತ್ತು. ಒಂದು ನಡೆದರೆ ಇನ್ನೊಂದು ಓಡುತ್ತಿತ್ತು. ಅದೇ ಮಧುರತೆಯನ್ನು ಹರೀಶಣ್ಣನಲ್ಲಿ ಹೇಳಿದೆ "ಬೆಳಕಿನ ಬಣ್ಣಗಳು ಹೇಗೆ ಓಡುತ್ತಾ ಇದಾವೆ ಅಲ್ವಾ?" ಅದಕ್ಕೆ ಅವರಂದರು "ಇಲ್ಲಪ್ಪ ಇಲ್ಲಿ ಯಾವುದು ಓಡುತ್ತಿಲ್ಲ. ತನ್ನ ಸಮಯದಲ್ಲಿ ಆ ಬೆಳಕು ಉರಿದು ಆರಿ ಮತ್ತೆ ಉರಿಯುತ್ತದೆ. ಅಷ್ಟೇ ಅಲ್ಲ ಪ್ರತಿಯೊಂದು ಬೆಳಕಿನ ಬಿಂಬಗಳು ಇಷ್ಟೇ ಕೆಲಸವನ್ನು ಮಾಡುತ್ತವೆ. ಹಾಗಾಗಿ ನಮಗೆ ಇಡೀ ಬೆಳಕೇ ಓಡಿದಂತೆ ಕಾಣುತ್ತಿದೆ".

ಹೌದಲ್ವಾ ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಸಾಕು ಎಲ್ಲವೂ ನಿರಾತಂಕವಾಗಿ ಅದ್ಭುತವಾಗಿ ಸಾಗುತ್ತದೆ. ಆರೋಗ್ಯದಲ್ಲಿ, ಸ್ವಚ್ಛತೆಯಲ್ಲಿ, ಭ್ರಷ್ಟಾಚಾರ ನಿಗ್ರಹದಲ್ಲಿ, ಪ್ರೀತಿಯಲ್ಲಿ, ಬದುಕಿನಲ್ಲಿ, ನಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಬದಿಗೆ ಸರಿದರೆ, ನಮ್ಮ ದೇಶದ ಜೀವನ, ವ್ಯಕ್ತಿಯ ಜೀವನ ಮಿನುಗುತ್ತದೆ. ಜೊತೆಗೆ ತುಂಬ ದೂರ ಸಾಗಿಬಿಡುತ್ತೇವೆ. ಸಣ್ಣ ಹೆಜ್ಜೆಗಳು ದೊಡ್ಡದೂರಿಗೆ ತಲುಪಿಸಲು ಕಾರಣವಾಗುತ್ತವೆ. ಕಲಿಯೋಕೆ ಎಲ್ಲ ಕಡೆಯೂ ಪಾಠ ಸಿಗುತ್ತೆ. ನೋಡುವ ನೋಟ ಯಾವುದು ಅನ್ನುವುದು ಮುಖ್ಯವಾಗುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ