ಸ್ಟೇಟಸ್ ಕತೆಗಳು (ಭಾಗ ೨೨೫) - ದೇವರ ಮಕ್ಕಳು

ಶಾಲೆಗೆ ರಜೆ ಘೋಷಿಸಿದರೂ ಅಥವಾ ಮಕ್ಕಳೇ ರಜೆ ಹಾಕಿದರೂ ಗೊತ್ತಿಲ್ಲ, ಆ ಮರದ ಕೆಳಗೆ ಆಟ ಆಡ್ತಾ ಇದ್ರು. ತುಂಬಾ ದಿನದಿಂದ ನಾನು ಅವರನ್ನ ಇಲ್ಲಿ ನೋಡಿರಲಿಲ್ಲ. ಇವತ್ತು ಗಮನಿಸಿದಾಗ ಯಾವತ್ತಿನ ಆಟಕ್ಕಿಂತ ಇವತ್ತಿನದ್ದೇನೋ ಭಿನ್ನವಾಗಿದೆ ಅನ್ನಿಸ್ತು. ಅದಕ್ಕಾಗಿ ಹತ್ತಿರ ಹೋದೆ. ಯಾವುದೋ ಒಂದನ್ನು ತುಂಡನ್ನ ಹಿಡಿದು ಅದನ್ನು ಒಂದು ಕಲ್ಲಿನ ಮೇಲೆ ಕೂರಿಸಿ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು. ವಸ್ತುವನ್ನ ಮತ್ತೆ ಗಮನಿಸಿದಾಗ ಅದು ಯಾವುದೋ ವಾಹನದ ತುಂಡಾದ ಬಿಡಿ ಭಾಗವೆಂದು ನನಗನ್ನಿಸಿತು. ಆ ತುಂಡನ್ನು ಮಕ್ಕಳೆಲ್ಲರೂ ದೇವರೆಂದು ನಂಬಿದ್ದರು. ಅದಕ್ಕೊಂದಿಷ್ಟು ಮಕ್ಕಳ ಅಲಂಕಾರಗಳು, ಕುಂಕುಮ, ಹೂವು ಇತ್ಯಾದಿಗಳನ್ನ ಇಟ್ಟು ಅವರ ಪೂಜೆ ಆರಂಭವಾಯಿತು. ಮನೇಲಿ ಕೇಳಿದ ಭಜನೆಗಳು, ಎಲ್ಲೋ ಕೇಳಿದ ಹಾಡು, ಇವೆಲ್ಲವೂ ಅವರ ಮಂತ್ರಗಳಾದವು. ಅಂಗಡಿಯಿಂದ ತಂದ ತಿಂಡಿಗಳು ದೇವರಿಗೆ ಅರ್ಪಿಸಿದ ನೈವೇದ್ಯವಾಯಿತು. ಕೋಲಿಗೆ ಎಲೆಯನ್ನ ಕಟ್ಟಿ ಆರತಿ ಮಾಡಿದರು. ಕೈ ಮುಗಿದರು, ತಂದ ತಿಂಡಿಯನ್ನು ಹಂಚಿಕೊಂಡು ತಿಂದರು.
ಅಲ್ಲಿಂದ ಹೊರಟರು. ದೇವರಾಗಿದ್ದ ಆ ಸಣ್ಣ ತುಂಡು ಹಾಗೆಯೇ ಅಲ್ಲಿಯೇ ಉಳಿಯಿತು. ಇವರ ಕೆಲಸ ದಿನವೂ ಆಗಮಿಸುವುದು. ಮತ್ತದೇ ಹಿಂದಿನ ದಿನದ ಚಟುವಟಿಕೆ. ಹೊರಟುಬಿಡುವುದು. ತುಂಡು ಹೊಸತೊಂದು ಶಕ್ತಿಯನ್ನು ಪಡೆದುಕೊಂಡು ದೇವರಾಯಿತೋ ಏನೋ ಗೊತ್ತಿಲ್ಲ. ಆದರೆ ಮಕ್ಕಳ ನಂಬಿಕೆಯಲ್ಲಿ ಅದು ದೇವರಾಗಿತ್ತು. ಅವರು ನಂಬಿದ್ದರು. ಅದರ ಸುತ್ತಮುತ್ತ ಯಾರು ಮಲಿನ ಮಾಡುವ ಹಾಗಿರಲಿಲ್ಲ, ಚಪ್ಪಲಿ ಧರಿಸುವ ಹಾಗಿರಲಿಲ್ಲ. ಜೋರು ಸ್ವರದಲ್ಲಿ ಮಾತನಾಡುವ ಹಾಗಿರಲಿಲ್ಲ. ಕೆಟ್ಟ ಪದ ಬಳಸುವ ಹಾಗಿರಲಿಲ್ಲ. ಇದೆಲ್ಲವೂ ಅವರ ನಂಬಿಕೆ. ಪ್ರತಿದಿನ ಶಾಲೆಯಲ್ಲಿ ಪಾಠ ಮಾಡುವ ನನಗೆ ಇವತ್ತು ಮಕ್ಕಳೇ ಪಾಠ ಮಾಡಿದರು. ನಾವು ನಂಬಬೇಕು ಆಗ ಕೆಲಸಗಳು ತನ್ನಿಂತಾನಾಗಿ ಸಾಧ್ಯವಾಗುತ್ತೆ. ನಾನು ನನ್ನ ವಿದ್ಯಾರ್ಥಿಗಳನ್ನು ನಂಬಬೇಕು, ನಾನು ಕಲಿಸುವ ಪಾಠವನ್ನು ನಂಬಬೇಕು, ನಾನು ಬರೆಯುವ ವಿಚಾರವನ್ನು ನಂಬಬೇಕು, ಅದರ ಪ್ರತಿಫಲ ಖಂಡಿತವಾಗಿ ಸಿಗುತ್ತೆ. ಇಷ್ಟು ದಿನ ಕೆಲಸ ಮಾಡ್ತಾ ಇದ್ದೆ, ನಂಬಿಕೆಯಿರಲಿಲ್ಲ. ಅದನ್ನು ದೇವರ ಮಕ್ಕಳು ತೋರಿಸಿಕೊಟ್ಟರು
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ