ಸ್ಟೇಟಸ್ ಕತೆಗಳು (ಭಾಗ ೨೨೭) - ಪ್ರತಿಭಟನೆ

ನಮ್ಮ ಮನೆ ಹತ್ತಿರದಲ್ಲಿ ಪ್ರತಿಭಟನೆ ಆರಂಭವಾಗಿದೆ. ಇದು ಯಾವುದೇ ಸರಕಾರದ ವಿರುದ್ಧ, ಒಂದು ಯೋಜನೆಯ ವಿರುದ್ಧ, ಒಂದು ಸಂಸ್ಥೆಯ ವಿರುದ್ಧ, ವ್ಯಕ್ತಿಯ ವಿರುದ್ಧ ಅಲ್ಲ. ಇಲ್ಲಿ ಪ್ರತಿಭಟನೆ ಆರಂಭವಾಗಿರುವುದು ಪ್ರಕೃತಿಯ ವಿರುದ್ಧವೇ. ಆರಂಭಮಾಡಿದ್ದು ಕೂಡ ಪ್ರಕೃತಿ. ಇತ್ತೀಚಿಗೆ ಮಳೆ ವಿಪರೀತವಾಗಿ ಸುರೀತಾ ಇದೆ. ಅದಕ್ಕೆ ಕಾಲ ಅನ್ನೋದಿಲ್ಲ, ಸಮಯ ಅನ್ನೋದಿಲ್ಲ. ತನಗಿಷ್ಟ ಬಂದಾಗ ಸುರಿಯೋಕೆ ಆರಂಭವಾಗುತ್ತೆ. ಇದನ್ನು ಸಹಿಸಿ ಸಹಿಸಿ ಮೊದಲ ಬಾರಿಗೆ ಪ್ರತಿಭಟನೆಯ ರೂಪವನ್ನು ಒಂದು ಚೌಕಟ್ಟಿಗೆ ತಂದು, ನೆಲದೊಳಗಿಂದ ದಿಗ್ಗನೆ ಎದ್ದು ನಿಂತದ್ದು ಅಣಬೆಗಳು. ಅವುಗಳೇ ಪ್ರತಿಭಟನೆಯ ಮುಂದಾಳತ್ವವನ್ನು ವಹಿಸಿಕೊಂಡವು. ಸತತವಾಗಿ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೇಲೆದ್ದು ಸೂರ್ಯನನ್ನ ನೋಡಿ ಉಸಿರಾಡೋಕೆ ಕಾಯುತ್ತಿದ್ದ ಅಣಬೆಗಳು ನೆಲದೊಳಗೆ ಬಿಗಿಯಾಗಿ ಅಲ್ಲೇ ಕೊಳೆತು ಹೋದವು. ಇದನ್ನ ಸಹಿಸಲಸಾಧ್ಯವಾಗಿತ್ತು. ಮೇಲೆ ಧಿಗ್ಗನೆ ಎದ್ದು ನಿಂತು ಪ್ರತಿಭಟನೆಗೆ ಕುಳಿತುಬಿಟ್ಟವು. ಅದರೊಂದಿಗೆ ಅದಕ್ಕೆ ಸಾಥ್ ನೀಡಿದ್ದು ಉಳಿದ ಗಿಡಮರಬಳ್ಳಿಗಳು. ಹಣ್ಣಾಗಬೇಕಿದ್ದ ಕಾಲದಲ್ಲಿ ಹೂವುಗಳನ್ನು ಉದುರಿಸಿಕೊಂಡು ಬೋಳಾಗಿ ನಿಂತ ಮರಗಳು ಪ್ರತಿಭಟನೆಗೆ ಸಹಕಾರ ನೀಡಿದವು. ಇದರ ಉಗ್ರ ಪ್ರತಿಭಟನೆಗೆ ಹೆದರಿಯೋ ಏನು ಮಳೆ ಊರು ಬಿಟ್ಟಿದೆ ಅಂತ ಅನಿಸುತ್ತಿದೆ. ತಂಪು ಗಾಳಿಯ ಸುದ್ದಿಯೂ ಇಲ್ಲ. ಮೋಡಗಳು ಕಾಣುತ್ತಿಲ್ಲ. ನನಗೆ ಗೊತ್ತಿರಲಿಲ್ಲ. ಅಣಬೆಗೆ ಎಷ್ಟೊಂದು ಶಕ್ತಿ ಇದೆ ಅಂತ ಸಾಂಬಾರಲ್ಲಿ ತಿಂದಾಗ ದೇಹಕ್ಕೆ ಗೊತ್ತಾಗುತ್ತಿತ್ತು. ಆದರೆ ಮಳೆಯನ್ನು ಓಡಿಸಿದ್ದು ಅಣಬೆಗಳು. ಹಾಗಾಗಿ ಹೆಮ್ಮೆಯಿಂದ ತಲೆಯೆತ್ತಿ ಆಗಸವನ್ನು ನೋಡಿ ನಗುತ್ತ ನಿಂತಿದ್ದವು. ಅಮ್ಮ ದೂರದಿಂದ ಪಾತ್ರೆಯನ್ನ ಹಿಡಿದುಕೊಂಡು ನಡ್ಕೊಂಡು ಬರ್ತಾ ಇದ್ರು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ