ಸ್ಟೇಟಸ್ ಕತೆಗಳು (ಭಾಗ ೨೨೮) - ಮುಷ್ಕರ

ಸ್ಟೇಟಸ್ ಕತೆಗಳು (ಭಾಗ ೨೨೮) - ಮುಷ್ಕರ

ನಿನ್ನೆ ರಾತ್ರಿ ಮಲಗಿದ್ದೆ ಇಂದು ಬೆಳಗೇ ಆಗುತ್ತಿಲ್ಲ. ಗಾಳಿ ದೂರ ದೂರ ಹೋದಂತೆ ಅನಿಸುತ್ತಿದೆ. ಬೆಳಕು ಕಾಣುತ್ತಿಲ್ಲ. ಸಮಯ ಓಡುತ್ತಿದ್ದರೂ ಸೂರ್ಯನ ಪ್ರವೇಶವಿಲ್ಲ. ಯಾಕೆ ಹೀಗಾಗಿದೆ ? ನನಗೆಷ್ಟು ಯೋಚಿಸಿದರೂ ಗೊತ್ತಾಗ್ತಾಯಿಲ್ಲ. ಆಗ ಪ್ರಕೃತಿ ಮಾತಾಡಿತು "ನೋಡು ಮಾರಾಯ, ನಿನ್ನೆ ನೀನೊಂದು ಕಥೆ ಬರೆದಿದ್ದೆ, ಅದರಲ್ಲಿ ನಾವು ಪ್ರತಿಭಟನೆಗೆ ಇಳಿದಿದ್ದೇವೆ ಅನ್ನೋದು ನಿನ್ನ ದೊಡ್ಡ ಸುದ್ದಿ. ಆದರೆ ನಿನಗೆ ಇದನ್ನು ನೇರವಾಗಿ ಹೇಳಬೇಕಿತ್ತು, ನಾವು ಯಾವುದೇ ಪ್ರತಿಭಟನೆಯಲ್ಲಿ ಇಲ್ಲ. ನಮ್ಮ ನಡುವಿನಲ್ಲಿ  ಹೊಂದಾಣಿಕೆ ಬದುಕಿದೆ. ನೀನಾಗಿಯೇ ಏನೋ ಅರ್ಥ ಕಲ್ಪಿಸಿಕೊಂಡಿದ್ದೀಯಾ.

ಗಿಡದಲ್ಲಿ ಹೂವು ಬಿಟ್ಟಿತ್ತು, ಹಣ್ಣಾಗುವ ಸೂಚನೆ ಸಿಕ್ಕಿತ್ತು .ಆ ಮಳೆರಾಯ ಬಂದು ಎಲ್ಲವನ್ನೂ ಹಾಳುಮಾಡಿದ ಒಪ್ಪಿಕೊಳ್ಳೋಣ. ಆದರೆ ಈಗ ಮತ್ತೆ ಬಿಸಿಲು ಮೂಡಿಸಿ ದೂರದೂರದ ಗಾಳಿಗಳನ್ನು ಇತ್ತ ಕಡೆಗೆ ಕಳುಹಿಸುತ್ತಿದ್ದಾನೆ. ದುಂಬಿ ಚಿಟ್ಟೆಗಳಿಗೆ ಮರು ಜೀವ ನೀಡಿದ್ದಾನೆ. ಗಾಳಿಗಳ ಮೂಲಕ ಹೊತ್ತು ಬರುವ ಬೇರೆ ಬೇರೆ ಗಿಡಗಳ ಬೀಜಗಳು ಪರಾಗಸ್ಪರ್ಶಕ್ಕೆ ಬೇಕಾಗುವ ಅಂಶಗಳು ಜೊತೆಗೊಂಡು ಇಲ್ಲಿಗೆ ಬರುತ್ತಿದ್ದಾರೆ, ಇಲ್ಲಿಂದ ಇನ್ನೊಂದೂರಿಗೆ ಸಾಗುತ್ತಾರೆ. ಹೀಗೆ ನಮ್ಮ ನಡುವೆ ಹೊಂದಾಣಿಕೆಯ ಬದುಕಿದೆ. ನಿನ್ನ ಹಾಗೆ ಕಚ್ಚಾಡುತ್ತಾ ಮನುಷ್ಯ ಅನ್ನೋದನ್ನ ಮರೆತು ನಿನ್ನೊಳಗೆ ಒಂದು ಪಂಗಡವನ್ನು ಸೃಷ್ಟಿಸಿಕೊಂಡು ನಾನು ಬೇರೆ ಅವನು ಬೇರೆ ಎನ್ನುವ ಬೇಲಿಗಳನ್ನು ಕಟ್ಟಿಕೊಂಡು ಬದುಕುತ್ತಾ ಇಲ್ಲ. ನಿನಗೆ ಇದನ್ನ ಅರ್ಥ ಮಾಡಿಸಬೇಕಿತ್ತು. ನಾವೆಲ್ಲರೂ ಜೊತೆಯಾಗಿ ಇದ್ದೇವೆ .ಅದಕ್ಕಾಗಿ ಇವತ್ತು ಎಲ್ಲರೂ ಸೇರಿ ಮುಷ್ಕರ ಮಾಡಿದ್ದು. ನಿನಗರ್ಥವಾಗಿದೆ  ಅಂತ ಅಂದುಕೊಳ್ಳುತ್ತೇನೆ". ಮಾತು ಮೌನವಾಯಿತು.  ಬೆಳಕು ಮೂಡಿತು. ದೂರ ಹೋಗುತ್ತಿದ್ದ ಗಾಳಿ ಕೋಣೆಯೊಳಗೆ ನುಗ್ಗಿಬಂತು. ನಾನು ಉಸಿರಾಡಿದೆ. ಕೈಮುಗಿದು ಕ್ಷಮೆ ಕೇಳಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ