ಸ್ಟೇಟಸ್ ಕತೆಗಳು (ಭಾಗ ೨೩೦) - ದ್ವಿಮುಖ

ಸ್ಟೇಟಸ್ ಕತೆಗಳು (ಭಾಗ ೨೩೦) - ದ್ವಿಮುಖ

ಪ್ರತಿಭಟನೆಯ ಕಾವು ಜೋರಾಗಿದೆ. ಜೋರು ಘೋಷಣೆಗಳು ಕೈಯಲ್ಲಿ ಹಿಡಿದ ವಿರೋಧದ ಫಲಕಗಳು. ಸುತ್ತ ಕುಳಿತಿರುವ ಜನ. ವೇದಿಕೆಯ ಮೇಲೆ ಆತ ಮಾತನಾಡುತ್ತಿದ್ದಾನೆ. "ನಮ್ಮ ಮನೆ ಮಗಳಿಗೆ ಹೀಗಾಗಿರುವುದು ದುರಂತ. ನಾವು ಮೌನವಾಗಿದ್ದರೆ ಇದು ಹೆಚ್ಚಾಗುತ್ತದೆ. ನಾವು ಇದಕ್ಕೆ ಪ್ರತಿಭಟಿಸಬೇಕು. ಉಗ್ರ ಹೋರಾಟದಿಂದ ಮಾತ್ರ ಅವಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ. ಹಾಗಾಗಿ ನಾವೆಲ್ಲರೂ ನ್ಯಾಯ ಸಿಗುವವರೆಗೆ ಹೋರಾಡೋಣ" ಎಂದ. ಕರತಾಡನಗಳು ಜೋರಾದವು. ಮತ್ತೆ ಘೋಷಣೆಗಳು ಮೊಳಗಿದವು. ಹಾರ-ತುರಾಯಿಗಳು ಅವನ ಹೆಗಲೇರಿದವು. ಟಿವಿ ಒಳಗೆ ಇಣುಕಿದ, ಪೇಪರ್ನಲ್ಲಿ ಸುದ್ದಿಯಾದ.

ಅಲ್ಲಿಂದ ತಿರುಗಿ ಬರುತ್ತಿರುವಾಗ ತನ್ನ ಎದುರುಮನೆಯಲ್ಲಿ ವಾಸಿಸುವ ಹುಡುಗಿ ತನ್ನ ಪ್ರಿಯತಮನ ಜೊತೆ ಮದುವೆಯಾಗಿದ್ದಕ್ಕೆ ಆಕೆಯ ಚಾರಿತ್ರ್ಯದ ಬಗ್ಗೆ ಮಾತನಾಡಿದ. "ನಾನು ಮೊದಲೇ ನೋಡಿದ್ದೆ ಆಕೆ ತುಂಬಾ ಜನರ ಜೊತೆ ಓಡಾಡುತ್ತಿದ್ದಳು. ಕೊನೆಗೆ ಒಬ್ಬ ಸಿಕ್ಕಿಬಿಟ್ಟ. ಈಗ ಮದುವೆಯಾಗಿದೆ ಅಷ್ಟೆ ಆದರೆ..... ಹೆಣ್ಣುಮಕ್ಕಳಿಗೆ ಬುದ್ಧಿನೇ ಇರುವುದಿಲ್ಲ ". ತುಟಿ ಮುಚ್ಚಿತು. ಯಾವುದು ಹಾಡು ಕೇಳುತ್ತಾ ಸುಮ್ಮನಾದ. ಅವನೊಂದಿಗೆ ಚಲಿಸುತ್ತಿದ್ದ ಚಪ್ಪಲಿ ಯೋಚಿಸಿತು, "ಇವನೆಂತಹ ನರರಾಕ್ಷಸ. ಸತ್ತ ಆತ್ಮಕ್ಕೆ ಶಾಂತಿ ಸಿಗೋಕೆ ಡೋಂಗಿ ಹೋರಾಟ ನಡೆಸುತ್ತಾನೆ. ಬದುಕಿರುವ ಜೀವದ ಚಾರಿತ್ರ್ಯ ವದೆ ಮಾಡುತ್ತಿದ್ದಾನೆ. ಇಂಥವನನ್ನು ನಾನು ಹೊರುತ್ತಿದ್ದೇನೆ ಅನ್ನೋದೇ ನನಗೆ ಜಿಗುಪ್ಸೆ ತರುತ್ತಿರುವ ವಿಷಯ. ನಾನು ತೊರೆದು ಚಲಿಸಬೇಕಿದೆ. ಜೀವಕ್ಕೆ ನೀಡದ ಮೌಲ್ಯ, ಸಾವಿಗೆ ಹೇಗೆ ನೀಡಲು ಸಾಧ್ಯ? ಮಾನವ ಅವನೊಳಗೆ ಹರಿಯಬೇಕಾದ ಮೂಲ ಮೌಲ್ಯವನ್ನೇ ಕಳೆದುಕೊಂಡಿರುವಾಗ ಅವನ ಕಾಲಿಗೆ ನೋವಾಗದಂತೆ ನಾನು ರಕ್ಷೆಯಾಗಿರುವೆ. ಮನಸ್ಸುಗಳಿಗೆ ನೋವಾಗದಂತೆ ನಡೆಯಬೇಕಾದ ಮಾನವನ  ಕರ್ತವ್ಯ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ