ಸ್ಟೇಟಸ್ ಕತೆಗಳು (ಭಾಗ ೨೩೧) - ಮಾತು ಮೌನ

ಸ್ಟೇಟಸ್ ಕತೆಗಳು (ಭಾಗ ೨೩೧) - ಮಾತು ಮೌನ

ಶಾಲೆಯ ಗಂಟೆ ಬಡಿದು ಎಲ್ಲರೂ ಮನೆಗೆ ತೆರಳುತ್ತಿದ್ದರು. ಅವನು ಮಾತ್ರ ಅಲ್ಲೇ ಕುಳಿತಿದ್ದ. ಹಿಂದಿನ ದಿನ ಅಪ್ಪ ಅವನಿಗೆ ತುಂಬಾ ಬೈದಿದ್ದರು. ಎಷ್ಟೊಂದು ಮಾತಾಡ್ತೀಯಾ? ಮೌನವಾಗಿರುವುದನ್ನು ಕಲಿತುಕೋ ಅಂದಿದ್ದರು. ಆದರೆ ಶಾಲೆಯಲ್ಲಿ ನೀವು "ಮಕ್ಕಳೇ ನೀವು ಮಾತಾಡಬೇಕು. ಮೌನವಾಗಿದ್ದರೆ ಹೇಗೆ? ಬದುಕು ಸಾಗಿಸುವುದು ಕಷ್ಟ ಅಲ್ವಾ? ಅಂತಿದ್ರೆ ನನಗೆ ಎರಡು ದ್ವಂದ್ವಗಳ ನಡುವೆ ಆರಿಸುವುದು ಯಾವುದನ್ನು ಅನ್ನೋದು ಪ್ರಶ್ನೆಯಾಗಿದೆ. ಅದಕ್ಕೆ ನಿಮ್ಮನ್ನು ನಿಲ್ಲಿಸಿದ್ದು ಸರ್. ನಾನು ಯಾವುದನ್ನು ಆರಿಸಿಕೊಳ್ಳಬೇಕು, ನೀವು ಹೇಳಿ. ಅದಕ್ಕೆ ಮೇಷ್ಟ್ರು "ನೋಡು ಮಗು, ಇಲ್ಲಿ ಎರಡೂ ಮುಖ್ಯವೇ ಆದರೆ ಕಾಲ ಮತ್ತು ಸಂದರ್ಭ ಯಾವುದನ್ನು ಬಯಸುತ್ತದೆ ಅದನ್ನು ನೀಡಬೇಕಾಗುತ್ತೆ. ಮುಂಜಾನೆ ಹೊತ್ತಿನಲ್ಲಿ ಕೇಳುವ ಹಕ್ಕಿಗಳ ನಾದಗಳು ನಿನಗೆ ಮಧ್ಯಾಹ್ನದ ಹೊತ್ತು ಕೇಳುವುದಿಲ್ಲ. ಕಾರಣವೇನು ಗೊತ್ತಾ ಮುಂಜಾನೆಯಲ್ಲಿರುವ ಮೌನವನ್ನು ಅದರ ನಂತರದ ಶಬ್ದಗಳು ನುಂಗಿಹಾಕುತ್ತದೆ. ಎಲ್ಲಿ ನಾವು ಹೆಚ್ಚು ಮಾತಾಡುತ್ತೇವೆಯೋ, ಅಲ್ಲಿ ಹಕ್ಕಿಗಳು ಬದುಕು ಸಾದ್ಯವಾಗೋದಿಲ್ಲ. ಹಾಗೆ ಪರಿಸರವು ಮೌನವಾಗುತ್ತದೆ. ಹಾಗಾಗಿ ಈ ಜಾಗದಲ್ಲಿ ನಾವು ಮೌನವಾಗಿದ್ದರೆ ಅದು ಮಾತಾಡುತ್ತೆ. ಇದು ನಮ್ಮ ಜಾಗ ಮಾತ್ರ ಅಲ್ಲ ಹಾಗಾಗಿ ಮೌನವನ್ನ ಆಸ್ವಾದಿಸಬೇಕು.  ಕೆಲವು ಕ್ಷಣ ನೀನು ಮಾತನಾಡದಿದ್ದರೆ  ಪರಿಸ್ಥಿತಿ ಕೈಮೀರುವ ಅಪಾಯವಿದ್ದಾಗ ಮಾತನಾಡಬೇಕು. ಆದರೆ ಹೆಚ್ಚು ಪ್ರಿಯವಾದದ್ದು ಮೌನ. ನಾವು ಮೌನವಾಗಿದ್ದರೆ ಪ್ರಕೃತಿ ಮಾತನಾಡುತ್ತೆ. ನಾವು ಮಾತನಾಡಿದರೆ ಪ್ರಕೃತಿ ಮೌನವಾಗುತ್ತದೆ. ಪ್ರಕೃತಿ ಹೆಚ್ಚು ಮೌನವಾಗಿದ್ದಷ್ಟು ನಮ್ಮ ನಾಶ ಹತ್ತಿರದಲ್ಲಿದೆ, ನಿನಗೆ ಈ ಮಾತುಗಳಿಗೆ ಎಷ್ಟು ಅರ್ಥವಾಗಿದೆಯೇ ಗೊತ್ತಿಲ್ಲ ಆದರೆ ಒಂದು ತಿಳ್ಕೊ, ಮಾತು ಮತ್ತು ಮೌನ. ಎರಡು ಅಗತ್ಯ. ಆದ್ರೆ ಮೌನ ಒಂದು ಸ್ವಲ್ಪ ಜಾಸ್ತಿ ಅಂತ ಹೇಳಬಹುದು. ನಗುವಿನಿಂದ ಶಾಲಾ ಹುಡುಗ ಹೊರಟ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ