ಸ್ಟೇಟಸ್ ಕತೆಗಳು (ಭಾಗ ೨೩೩) - ಬಣ್ಣದೂರು

ಸ್ಟೇಟಸ್ ಕತೆಗಳು (ಭಾಗ ೨೩೩) - ಬಣ್ಣದೂರು

ಬಣ್ಣದೂರಿನ ಕನಸು ತುಂಬಿದವನು ಗೆಳೆಯ ಚಿದಂಬರ. ಹಾಗಾಗಿ ವಿಳಾಸವಿಲ್ಲದ ಊರಿಗೆ ಹೊರಡಲು ಬಸ್ಸನ್ನೇರಿದೆ. ಬಣ್ಣದೂರಿನ ಪುಳಕವನ್ನು ಅನುಭವಿಸಬೇಕಿತ್ತು. ಯಾರೊಬ್ಬರೂ ಇಲ್ಲ. ಬಸ್ಸು ಚಲಿಸುತ್ತಿದೆ. ಊರು ತಲುಪಿದಾಗ ಬೆಳಕಾಗಿತ್ತು. ಉದಯಿಸಿದ ನೇಸರನ ಸುತ್ತ ಬಣ್ಣದ ಚಿತ್ತಾರವಿಲ್ಲ. ಕಣ್ಣೊಳಗೆ ಬರಿಯ ಕಪ್ಪು ಬಿಳುಪುಗಳು ಮಾತ್ರ ಇಣುಕುತಿದೆ. ಗಿಡದ ಎಲೆ ಬಿಳಿ, ಬೇರನ್ನಪ್ಪಿ ಹಿಡಿದರುವ ಮಣ್ಣು ಕಪ್ಪು, ನಮ್ಮೂರಲ್ಲಿ ನೀಲಿಯಾಗಿದ್ದ ಆಗಸ ಕಪ್ಪಾಗಿದೆ, ಚಂದಿರ ಬಿಳಿಯ ಬೆಳಕ ಚೆಲ್ಲಿದ್ದಾನೆ, ಕಾಲೆಡವಿದಾಗ ನನ್ನ ಕಾಲಿನಿಂದೊಸರಿದ ರಕ್ತ ಬಿಳಿ, ಶುಭ್ರ ಮನಸ್ಸುಗಳ ನಡುವೆ ಕಲಹ ಸೃಷ್ಟಿಸಿದವನ ರಕ್ತ ಕಪ್ಪು, ಕಪ್ಪು ಮೊಗದಲ್ಲಿ ಬಿಳಿ ಹಲ್ಲು, ಬೀದಿಯೆಲ್ಲ ಅಲೆದರೂ ಕಪ್ಪು ಬಿಳಿಗಳೇ ಊರು ಸುತ್ತುತ್ತಿವೆ, ಬಣ್ಣಗಳನ್ನ ಪಕ್ಕದೂರಿಂದ ಹೊತ್ತು ತಂದರೂ ಇಲ್ಲಿ ಬಿಳಿಗೋ ಕಪ್ಪಿಗೋ ತಿರುಗುತಿದೆ. ಬಣ್ಣದೂರಿನಲ್ಲಿ ಬೇರೆ ಬಣ್ಣವಿಲ್ಲ. ಅಲ್ಲಿರೋರಿಗೆ ಅದರ ಅಗತ್ಯವೂ ಇಲ್ಲ. ಕನಸ ದಾಟಿಸ ಬೇಕು, ನಮ್ಮೂರಿಗೆ ಸುದ್ದಿ ಹಂಚಬೇಕು. ಬಣ್ಣದೂರಿನ ಹಾಜರಾತಿ ಹೆಚ್ಚಿಸಬೇಕು. ನನಗಿಲ್ಲಿ ಬದುಕಬೇಕು. ನಿಮಗೆ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ