ಸ್ಟೇಟಸ್ ಕತೆಗಳು (ಭಾಗ ೨೩೪) - ಮುಗಿದ ದಿನ

ಸ್ಟೇಟಸ್ ಕತೆಗಳು (ಭಾಗ ೨೩೪) - ಮುಗಿದ ದಿನ

ಸೂರ್ಯನ ಕೆಲಸದ ಅವಧಿ ಮುಗಿದಿತ್ತು. ವಿಶ್ರಾಂತಿಗೆ ಮನೆಯ ಕಡೆ ಹೊರಟಿದ್ದ. ಅವನ ಮನೆಯ ಬಾಗಿಲಲ್ಲಿ ಮೋಡಗಳು ರಂಗೋಲಿ ಹಾಕಿದ್ದವು. ಅವನ ಆಗಮನಕ್ಕೆ ಚಿತ್ತಾಕರ್ಷಕವಾದ ಬಣ್ಣಗಳ ಅಲಂಕಾರವನ್ನು ಬಣ್ಣಗಳ ಚಿತ್ತಾರವನ್ನು ಮನೆಯವರು ಬಿಡಿಸಿದ್ದರು. ಇದು ದಿನವೂ ನಡೆಯುವ ಪ್ರಕ್ರಿಯೆ. ಸೂರ್ಯ ಕೆಲಸಕ್ಕೆ ಹೊರಡುವಾಗ ಕೆಲಸದಿಂದ ಮರಳುವಾಗ ಮನೆ ಸದಾ ಬಣ್ಣಗಳಿಂದ ಬಣ್ಣಗಳ ಓಕುಳಿಯಿಂದ ಮಿಂದಿರುತ್ತದೆ. ಪ್ರತಿದಿನವೂ ನೂತನತೆ ಕಾಣುತ್ತಿದೆ. ಅದನ್ನು ನೋಡಿ ಖುಷಿ ಪಡುತ್ತಾ ಇರುವಾಗ ಶ್ರೀಶ ಅಣ್ಣ ಹೇಳಿದರು " ಅಲ್ಲೋ ಮಾರಾಯ ನಮ್ಮ ಆಯುಷ್ಯದ ಒಂದು ದಿನ ಇವತ್ತಿಗೆ ಮುಗಿದೇ ಹೋಯಿತಲ್ಲಾ" ಹೌದಲ್ವ,  ಆಯುಷ್ಯದ ದಿನಗಳು ಓಡುತ್ತಿವೆ .ನಾನು ಈ ದಿನ ಏನು ಹೊಸತನ್ನು ಮಾಡಿದೆ, ನಾನು ಓಡಬೇಕು . ನಡೆದರೆ ಆಯಸ್ಸು ನನ್ನ ಜೊತೆ ನಡೆಯೋದಿಲ್ಲ. ಅದರ ವೇಗಕ್ಕೆ ನಾನು ಒಗ್ಗಬೇಕು. ನನ್ನ ಉತ್ಸಾಹ ಹುಮ್ಮಸ್ಸು, ಹೊಸ ಕೆಲಸ ನೋಡಿ ನನ್ನ ಆಯಸ್ಸಿನ ಕೊನೆಯ ದಿನಗಳನ್ನು ಅಳಿಸಿ ಇನ್ನೊಂದಷ್ಟು ದಿನಗಳನ್ನು ಜೋಡಿಸಿಬೇಕು. ಹಾಗಾಗಿ ನಾನು ನಿರ್ಧರಿಸಿದ್ದೇನೆ. ಪ್ರತೀ ದಿನವನ್ನು ಇನ್ನೂ ಅಂದವಾಗಿ ಬದುಕುತ್ತೇನೆ. ಪ್ರೀತಿಸುತ್ತೇನೆ, ಕಲಿಯುತ್ತೇನೆ.  ಹೀಗೆ ಮಾಡಿದರೆ ಆಯಸ್ಸಿನ ಪೂರ್ಣವಿರಾಮವನ್ನು ಅಳಿಸಿ ಇನ್ನೊಂದಷ್ಟು ಪುಟಗಳನ್ನು ಜೀವನಕ್ಕೆ ಬರೆಯಲು ಭಗವಂತ ನೀಡಬಹುದು ಅಲ್ವಾ ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ