ಸ್ಟೇಟಸ್ ಕತೆಗಳು (ಭಾಗ ೨೩೫) - ವಿದ್ಯಾಲಯ

ನನಗೊಂದು ವಿದ್ಯಾಲಯ ಕಟ್ಟಬೇಕು. ಅಲ್ಲಿ ಎಲ್ಲ ಬೋಧನೆಯು ಇರಬೇಕು. ನನ್ನ ಶಾಲೆಯಿಂದ ಹೊರ ಬರುವವರಿಗೆ ಯಾವುದೇ ಪದವಿ ಸಿಗುವುದಿಲ್ಲ. ನನ್ನ ಶಾಲೆಯ ಗಣಿತದಲ್ಲಿ ಹೊಸತನವನ್ನು ಕೂಡಿಸಲು, ನೋವು ದ್ವೇಷಗಳನ್ನು ಕಳೆಯಲು ಕಲಿಸಲಾಗುತ್ತದೆ. ನನ್ನ ವಿದ್ಯಾರ್ಥಿ ಆವಿಷ್ಕರಿಸಿಬೇಕು ಯಂತ್ರಗಳನ್ನಲ್ಲ, ಪ್ರೀತಿ ಮತ್ತು ಮಮತೆಯನ್ನು, ಇಲ್ಲಿ ರಿಪೇರಿಗಳನ್ನು ಕಲಿಸಲಾಗುತ್ತದೆ, ಸಿಟ್ಟು ಜಗಳದ ಮನಸ್ಸನ್ನು ರಿಪೇರಿ ಮಾಡಬೇಕು. ಹಣ್ಣಲ್ಲಿ ಸಿಹಿ ಎಷ್ಟೇ ಇದ್ದರೂ ನೆಲ ಬಯಸುವುದು ಅದರ ಬೀಜವನ್ನು ಮಾತ್ರ ಹಾಗೆಯೇ ಇಲ್ಲಿ ಭವಿಷ್ಯದ ಆಲೋಚನೆಗಳನ್ನು ಬಿತ್ತಿ ಬೆಳೆಯುವುದನ್ನು ಕಲಿಸಲಾಗುತ್ತದೆ. ಗಾರೆ ಕೆಲಸವಿದೆ ಒಡಕು ಬಿರುಕುಗಳನ್ನು ಜೋಡಿಸಲು ಸಂಬಂಧದ ಸೇತುವೆ ಕಟ್ಟಲು. ಚಿತ್ರ ಬಿಡಿಸುವುದನ್ನು ಕಲಿಸಲಾಗುತ್ತದೆ ಆದರೆ ಒಂದು ಷರತ್ತು ಎಲ್ಲರ ಮೊಗದಲ್ಲಿ ನಗುವನ್ನು ಚಿತ್ರಿಸಬೇಕು. ಇಂತಹ ಶಾಲೆಯೊಂದನ್ನು ಕಟ್ಟಲು ಬಣ್ಣದೂರಿಗೆ ಆಗಮಿಸಿದ್ದೇನೆ. ನನ್ನೊಬ್ಬನಿಂದ ಸಾಧ್ಯವಿಲ್ಲ. ಇದಕ್ಕೆ ಶಿಕ್ಷಕರು ಬೇಕು, ವಿದ್ಯಾರ್ಥಿಗಳು ಬೇಕು, ನಿರ್ಮಾತೃಗಳು ಬೇಕು, ನೀವು ಜೊತೆಗಿರಬೇಕು. ಏನಂತೀರಿ ನನ್ನ ವಿದ್ಯಾಲಯಕ್ಕೆ ನಿಮ್ಮಿಂದ ಸಹಾಯ ಬಯಸಬಹುದೇ..?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ