ಸ್ಟೇಟಸ್ ಕತೆಗಳು (ಭಾಗ ೨೩೯) - ಭಯದ ಕಾರ್ಖಾನೆ

ಸ್ಟೇಟಸ್ ಕತೆಗಳು (ಭಾಗ ೨೩೯) - ಭಯದ ಕಾರ್ಖಾನೆ

ಮರಳ ಮನೆಗೆ ಹನಿಹನಿಯಾಗಿ ನೀರನ್ನು ಸಿಂಪಡಿಸುತ್ತಾ ಮತ್ತೆ ಆಳ ಸಮುದ್ರಕ್ಕೆ ಅಲೆಗಳು ಮರಳುತ್ತಿದ್ದಾವೆ. ಈ ಮರಳಿನ ತೀರದಲ್ಲಿ ಓಡಾಟದ ಪಾದದ ಗುರುತಿಲ್ಲ. ಸಂಜೆಯ ತಿಳಿ ತಂಪಿಗೆ, ಮುಂಜಾನೆಯ ಎಳೆ ಬಿಸಿಲಿಗೆ, ಜನರು ಇಲ್ಲಿ ಮೈಯೊಡ್ಡುವುದಿಲ್ಲ, ನೀರಾಟವಾಡುವುದಿಲ್ಲ. ಆಳ ಸಮುದ್ರಕ್ಕೆ ಮೀನು ಹಿಡಿಯೋರು, ದಿನದ ಕೆಲಸಕ್ಕೆ ತೀರದಿಂದ ಹೊರಡುವ ಹಡಗುಗಳಿಲ್ಲ, ದೋಣಿಗಳಿಲ್ಲ, ತೆಪ್ಪಗಳಿಲ್ಲ. ಬೇರೆ ಸಮುದ್ರಗಳಲ್ಲಿ ಆದರೆ ಅಲೆಗಳು ಒಂದಷ್ಟು ಪಾದಗಳೊಂದಿಗೆ ಮಾತನಾಡುತ್ತವೆ. ಆದರೆ ಇಲ್ಲಿ ಮರಳು ಮತ್ತು ಸಮುದ್ರದೊಂದಿಗೆ ಮಾತ್ರ ಮಾತುಕತೆ ದಿನವೂ ನಡೆಯುತ್ತದೆ. ಹಾಗಾಗಿ ಈ ತೀರದಲ್ಲಿ ಒಂದಷ್ಟು ಜೀವರಾಶಿಗಳು ಬದುಕುತ್ತಿದ್ದಾವೆ. ಸಹವಾಸಗಳು ಭಯವನ್ನುಂಟು ಮಾಡಿದರೆ ತೊರೆದೇ ಬದುಕ ಬೇಕಷ್ಟೆ. ಹಾಗಾಗಿ ಜನರಿದ್ದ ತೀರ ಪ್ರದೇಶದಿಂದ ಹೊರಟುಬಂದು ಯಾರ ತೊಂದರೆಯೂ ಇಲ್ಲದ ತೀರದಲ್ಲಿ ನೆಮ್ಮದಿಯ ಜೀವನವನ್ನು  ಈ ಜೀವಿಗಳು ನಡೆಸುತ್ತಿದ್ದಾವೆ. ಮಾನವನ ವ್ಯಭಿಚಾರದಿಂದ ತೀರದಲ್ಲಿದ್ದವು  ಸಮುದ್ರದಾಳಕ್ಕೆ ಇಳಿದವು. ಅಲ್ಲೇ ಉಸಿರಾಡೋದು ಎಷ್ಟು ದಿನ. ಅಲ್ಲೇ ಹೇಗೆ ಬದುಕೋಕೆ ಸಾಧ್ಯ. ಮತ್ತೆ ತೀರವನ್ನು ಅವಲಂಬಿಸಬೇಕಾಗಿತ್ತು. ಹಾಗಾಗಿ ಯಾರಿಲ್ಲದ ಈ ತೀರವನ್ನು ಹತ್ತಿಕೊಂಡವು. ಜನರ ಓಡಾಟದ ಗಾಡಿಗಳು ದೂರದಲ್ಲಿ ಹೊಗೆಯುಗುಳುತ್ತಿವೆ, ಸಣ್ಣ ಅಂಗಡಿಗಳ ಪಂಚಾಗ ಬಿದ್ದಿವೆ, ಪಾದಗಳು ಹೆಜ್ಜೆ ಇರಿಸುತ್ತಿವೆ. ನೆಮ್ಮದಿಯ ಬದುಕಿಗೆ ಜೀವಿಗಳು ತಿಲಾಂಜಲಿಯನ್ನು ನೀಡಬೇಕೋ ಅನ್ನುವ ಭಯದಲ್ಲಿ ಜೀವನ ಸಾಗಿಸುತ್ತಿವೆ. ಮಾನವ ಭಯ ಹುಟ್ಟಿಸುತ್ತಿದ್ದಾನೆ. ಮಾನವ ಭಯದ ಕಾರ್ಖಾನೆ ಆಗುತ್ತಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ