ಸ್ಟೇಟಸ್ ಕತೆಗಳು (ಭಾಗ ೨೪೦) - ಮಿಕ್ಸಿ ಮಾತಾಡಿತು

ಸ್ಟೇಟಸ್ ಕತೆಗಳು (ಭಾಗ ೨೪೦) - ಮಿಕ್ಸಿ ಮಾತಾಡಿತು

ನಾನ್ಯಾರು ದಿತಿ ಗರ್ಭ ಸಂಜಾತ .... ಹೀಗಂತ ಹೇಳೋಕೆ ನನ್ನ ವಂಶದ  ಬಗ್ಗೆ ನನಗೆ ತಿಳಿದಿಲ್ಲ. ಆದರೂ ನಾನು ನಿಮ್ಮೊಳಗೊಬ್ಬನಾಗಿದ್ದೇನೆ. ನಾನೇನು ಸಾವಿರಾರು ವರ್ಷಗಳಿಂದಲೂ ನಿಮ್ಮೊಂದಿಗೆ ನಡೆದು ಬಂದವನಲ್ಲ. ಕೆಲವು ವರ್ಷಗಳ ಹೆಜ್ಜೆಗಳಷ್ಟೇ ನನ್ನದು. ಇವತ್ತು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಕಾರಣವೇನೆಂದರೆ ಅವನ್ಯಾರು ಹೇಳಿದ್ದ, ಅದಕ್ಕೆ ನಿನ್ನ ಮುಂದೆ ತುಟಿ ಬಿಚ್ಚಿದ್ದೇನೆ. ಇಲ್ಲದಿದ್ದರೆ ಕೆಲಸ ಮಾತ್ರ ನನ್ನದು. ನಾನು ಎಲ್ಲವನ್ನು ನುಣ್ಣಗೆ ಮಾಡೋ ಕೆಲಸ ಮಾಡುತ್ತೇನೆ. ಅದರಲ್ಲೇ ನಾನು ಪರಿಣಿತಿಯನ್ನು ಪಡೆದಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕ ಕೆಲಸ ಅದನ್ನು ಮೀರಿ ಪ್ರಯತ್ನಪಟ್ಟಾಗಲೆಲ್ಲಾ ಹಾನಿಗೊಳಗಾಗಿ ರಿಪೇರಿಯ ಆಸ್ಪತ್ರೆಗೆ ನಡೆದಿದ್ದೇನೆ. 

ನಾನು ಏನೇ ಕೆಲಸ ಮಾಡಬೇಕಾದರೂ, ನೀವು ವಿದ್ಯುತ್ ಅಂತಿರಲ್ಲ, ಅವನು ಇರಲೇಬೇಕು. ನಿಮಗೆ ಹೇಗೆ ಭಗವಂತನ ಆಶೀರ್ವಾದ ಬೇಕು ಹಾಗೆ. ನನಗೆ ವಿದ್ಯುತ್, ನನ್ನೊಳಗೆ ಬರುವ ಯಾವುದೇ ವಸ್ತುಗಳನ್ನು ಇದು ಬೇಕು, ಇದು ಬೇಡ, ಇದನ್ನು ಬದಲಾಯಿಸಿ ಹೀಗಂತ ನಾನೆಲ್ಲೂ ಹೇಳಿಲ್ಲ. ನನ್ನ ಪ್ರಯತ್ನವನ್ನು ಮಾಡಿದ್ದೇನೆ. ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಹೇಗೆ ಸಿಗುತ್ತೆ  ಅನ್ನೋದನ್ನ ಯೋಚನೆ ಮಾಡಿಲ್ಲ .ನೀನು ಹಾಗೆ ಇರು, ಬೇಕು- ಬೇಡಗಳು ವಿಪರೀತವಾದರೆ ನಿನ್ನ ಸಾಮರ್ಥ್ಯದ ಅರಿವು ನಿನಗೆ ಆಗುವುದಿಲ್ಲ. ಪ್ರಯತ್ನಿಸಿದೆ .

ಪ್ರಯತ್ನಿಸಿಯೂ ನಿನ್ನಿಂದ ಸಾಧ್ಯವಾಗದಿದ್ದರೆ ನೀನು ಅಲ್ಲಿಂದ ಹೊರಡಬಹುದು. ನನ್ನೊಳಗೆ ಹಾಕುವ ಯಾವುದೇ ವಸ್ತುವನ್ನು ನುಣ್ಣಗೆ ಮಾಡುತ್ತೇನೆ. ನನ್ನೊಳಗೆ ಬಂದ ವಸ್ತುಗಳ ಮೂಲ ಸ್ವರೂಪ ಬದಲಾಗುತ್ತೆ ಆದರೆ ನನ್ನ ಭಾವಗಳು ಹಾಗೆ ಉಳಿದುಬಿಡುತ್ತೆ ನೀನು ಕೂಡ, ನಿನ್ನ ದೇಹ ಸ್ವರೂಪಗಳು ಬದಲಾದರೂ ವ್ಯಕ್ತಿತ್ವವನ್ನು ಹಾಗೆ ಉಳಿಸಿಕೊ… ಆಗಾಗ ನನ್ನ ಆಯುಧಗಳನ್ನು ಹರಿತಗೊಳಿಸುತ್ತಿರಬೇಕು, ಇಲ್ಲವಾದರೆ ಸಾಮರ್ಥ್ಯ ಕುಂದಿ ಮೂಲೆ ಗುಂಪಾಗುತ್ತೇನೆ. ಇವತ್ತು ಬರುತ್ತೇನೆ, ನಾನು ನಾಳೆ ಬೆಳಗ್ಗಿನ ತಿಂಡಿಗೆ ಏನಾಗಬೇಕು ಗೊತ್ತಿಲ್ಲ ಹೊರಡ್ತೇನೆ, ನಾಳೆ ಸಿಗೋಣ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ