ಸ್ಟೇಟಸ್ ಕತೆಗಳು (ಭಾಗ ೨೪೧) - ಕ್ಷಮೆ ಮಾತಾಡಿತು

ನನಗೆ ಸಿಗಬೇಕಾದ ಮೌಲ್ಯ ಸಿಗುತ್ತಿಲ್ಲ. ಅಂದರೆ ಎಲ್ಲಾ ಕಡೆಯೂ ವಿಪರೀತವಾಗಿ ಬಳಕೆಯಾಗುತ್ತಿದ್ದೇನೆ. ನನಗೆ ಮೌಲ್ಯವೇ ಇಲ್ಲದಂತಾಗಿದೆ. ಆದಕ್ಕೆ ನಾನು ಊರು ಬಿಡಬೇಕೆಂದು ನಿರ್ಧರಿಸಿದ್ದೇನೆ. ಇನ್ಯಾರು ನನ್ನ ಬಳಸುವುದೇ ಬೇಡ. ನೀವು ಬಳಸುತ್ತಿದ್ದೀರಲ್ಲ ಒಪ್ಪಿಕೊಳ್ಳುತ್ತೇನೆ. ಆದರೆ ನನಗೆ ನನ್ನದೇ ಚೌಕಟ್ಟುಗಳಿವೆ. ಅರ್ಥವಿದೆ, ಅದಕ್ಕೊಂದು ಮಹತ್ವವಿದೆ .
ಒಬ್ಬ ವ್ಯಕ್ತಿಯ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡು ,ಅದನ್ನು ಮನ್ನಿಸುವಷ್ಟು ನಾನು ದೊಡ್ಡವನಾಗಿಲ್ಲ. ಕೆಲವೊಮ್ಮೆ ನನ್ನನ್ನ ಬಳಸುವವರನ್ನು ಕಂಡಾಗ ಹೊಟ್ಟೆಯುರಿಯುತ್ತದೆ. ನನ್ನ ಬಗ್ಗೆ ಅಸಹ್ಯ ಎನಿಸುತ್ತದೆ.
ಜೀವ ಒಂದು ಉಸಿರು ಕಳೆದುಕೊಂಡಿದೆ, ಮಾನವನ್ನು ಬೀದಿಯಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ, ಅಸಹ್ಯದ ಮಾತುಗಳು ಹಲವಾರು ಮನಸ್ಸುಗಳನ್ನು ನೋಯಿಸಿದೆ, ಸೋತವನಿಗೆ ಮತ್ತೆ-ಮತ್ತೆ ಘಾಸಿಯಾಗಿದೆ. ಈ ಎಲ್ಲ ಘಟನೆಗಳು ನಡೆದಾಗ ನೋವು ಅನುಭವಿಸುವ ಜೀವಗಳ ಯಾತನೆ ಅನುಭವಿಸಿದವರಿಗೆ ಮಾತ್ರ ಸಿಗಲು ಸಾಧ್ಯ. ಹೀಗಿರುವಾಗ ಎಲ್ಲಾ ಕಡೆ ನನ್ನ ಬಳಸುತ್ತಿರಲ್ವಾ? ಯಾಕೆ. ನಿಮಗೆ ನೀವು ಮಾಡಿರುವ ತಪ್ಪುಗಳಿಗೆ ನನ್ನನ್ನು ಬಳಸಿದ ಕ್ಷಣ ನೀವು ಉತ್ತಮರಾಗುವುದಿಲ್ಲ. ಹಾಗಾಗಿ ನನ್ನ ಚೌಕಟ್ಟಿಗೆ ಸರಿಯಾಗಿ ನನ್ನ ಬಳಸಿಕೊಳ್ಳಿ. ಅದು ಬಿಟ್ಟು ನಿಮ್ಮ ಎಲ್ಲಾ ಅಶುಭ ಕೆಲಸಗಳಿಗೆ ದುಷ್ಕೃತ್ಯಗಳಿಗೆ ಸಹಾಯಕನಾಗಿ ನಾನು ಅಡ್ಡಗೋಡೆ ಆಗಬಾರದು. ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ನನ್ನನ್ನು ಬಳಸಿದ ಕ್ಷಣ ಒಳ್ಳೆಯವನಾಗುದಿಲ್ಲ. ಹಾಗಾಗಿ ಮತ್ತೆ ಹೇಳುತ್ತಿದ್ದೇನೆ ನನಗೆ ನನ್ನದೇ ಆದ ಅರ್ಥವಿದೆ. ಅದರೊಳಗೆ ನನ್ನ ಬಳಸಿ, ಇಲ್ಲವಾದರೆ ತಪ್ಪೊಪ್ಪಿಕೊಂಡು ಶಿಕ್ಷೆ ಅನುಭವಿಸಿ. ನಾನಿಷ್ಟು ಮಾತನಾಡಿದ್ದೇನೆ ನಾನು ನನ್ನದೇ ಹೆಸರಿನ ಕಾರ್ಯವನ್ನು ಸ್ವತಃ ನನ್ನಲ್ಲೇ ಕೇಳಿಕೊಳ್ಳಲು ಸಿದ್ಧನಾಗುತ್ತಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ