ಸ್ಟೇಟಸ್ ಕತೆಗಳು (ಭಾಗ ೨೪೩) - ಅವಳು ಹಿಂಬಾಲಿಸಿದಳು !

ಸ್ಟೇಟಸ್ ಕತೆಗಳು (ಭಾಗ ೨೪೩) - ಅವಳು ಹಿಂಬಾಲಿಸಿದಳು !

ನಾನು ತುಂಬಾ ಸಮಯದಿಂದ ಗಮನಿಸಿಲ್ಲ. ಇತ್ತೀಚೆಗೆ ಶಶಿಕಿರಣ ಹೇಳಿದ ನಂತರ ಈ ವಿಚಾರ ತಿಳಿದದ್ದು. ಅವಳು ತುಂಬಾ ಹಿಂಬಾಲಿಸುತ್ತಿದ್ದಾಳೆ ನನ್ನನ್ನ. ಹೋದಲ್ಲೆಲ್ಲಾ ನನ್ನ ಹಿಂದೆನೇ ಬರ್ತಾ ಇದ್ದಾಳೆ. ನನ್ನೆಡೆಗೆ ವಿನೂತನವಾದ ನಗೆಯನ್ನು ಬೀರುತ್ತಾ, ಸುಂದರ ನಡಿಗೆಯನ್ನು ಮುಂದುವರೆಸುತ್ತಾ, ನನ್ನನ್ನ ತಿಳಿಯಲು ಏನೇನೋ ಕಸರತ್ತುಗಳನ್ನು ಮಾಡುತ್ತಾ, ನನ್ನ ಹಿಂಬಾಲಿಸುತ್ತಾಳೆ. ನಾನು ಕಾಲೇಜಿಗೆ ಹೋದಮೇಲೆ ಆಕೆ ಅಲ್ಲೆಲ್ಲೂ ಕಾಣಸಿಗುವುದಿಲ್ಲ. ಯಾಕೆಂದರೆ ಯಾರು ಏನನ್ನುತ್ತಾರೋ ಅನ್ನುವ ಭಯವಿರಬೇಕು ಅವಳಿಗೆ. ಕಾಲೇಜಿನಿಂದ ಹೊರಬಂದ ಕೂಡಲೇ ನನ್ನ ಗುರುತಿಸುತ್ತಾಳೆ. ಒಂದು ದಿನವೂ ನನ್ನ ಹತ್ತಿರ ಬಂದು ನಿಂತಿಲ್ಲ. ನನ್ನ ಬಳಿ ಕುಶಲೋಪರಿ ಮಾತನಾಡಿಲ್ಲ. ದೂರದಲ್ಲಿ ನಿಂತು ಹಿಂದೆಯೇ ಬರುತ್ತಾಳೆ, ನಾಚಿಕೊಳ್ಳುತ್ತಾಳೆ. ಮತ್ತೆ ತಿರುಗಿ ಹೋಗುತ್ತಾಳೆ. ಒಮ್ಮೆಯಾದರೂ ನನಗೆ ಒಮ್ಮೆಯಾದರೂ ಅವಳೊಂದಿಗೆ ಮಾತನಾಡಬೇಕು, ಅವಳ ಈ ವರ್ತನೆಗೆ ಕಾರಣವನ್ನು ಕೇಳಿ ತಿಳಿಯಬೇಕು. ಏಕೆಂದರೆ  ನೋಡಿದವರು ನನ್ನ ಬಗ್ಗೆ ಏನಾದರೂ ಅಪಾರ್ಥ ತಿಳಿಯುವ ಮೊದಲು ಇದಕ್ಕೊಂದು ಪೂರ್ಣವಿರಾಮ ನೀಡಬೇಕೆಂದು ಕಾಯುತ್ತಿದ್ದೆ. ದಿನವೇ ಸಿಗುತ್ತಿಲ್ಲ. ಅವತ್ತು ಜೋರು ಮಳೆ. ಕಾಲೇಜಿನಲ್ಲಿ ಯಾರೂ ಇರಲಿಲ್ಲ.

ಎಲ್ಲರೂ ಮನೆಗೆ ತೆರಳಿಯಾಗಿತ್ತು. ಆಕೆ ರಸ್ತೆಯ ಎದುರಿನ ಅಂಗಡಿಯಲ್ಲಿ ನಿಂತಿದ್ದಾಳೆ. ನಾನು ಅತ್ತ ಕಡೆ ಹೋಗಲೋ, ಅಥವಾ ಅವಳು ಇತ್ತ ಕಡೆಗೆ ಬರುತ್ತಾಳೋ ಅಂತ ಕಾಯುತ್ತಿದ್ದೆ. ನನ್ನ ಪುಣ್ಯ ಅಂತ ಅನ್ಸುತ್ತೆ ಅವಳು ರಸ್ತೆ ದಾಟಿ ನನ್ನ ಬಳಿಗೆ ಬಂದಳು. ಇವತ್ತು ಎಲ್ಲ ವಿಚಾರಗಳಿಗೂ ಅಂತಿಮ ಸ್ಪರ್ಶ ನೀಡುವ ನಿರ್ಧಾರ ಮಾಡಿದೆ. ಹಾಗಾಗಿ ಮಾತನಾಡಿದೆ, ಅವಳ ಮುಖದಲ್ಲಿ ಒಂದು ಹುಸಿನಗು ಇತ್ತು. ಅವಳ ಕೈಹಿಡಿದು ಪ್ರೀತಿಯಿಂದ ತಲೆ ಸವರಿದೆ ಮತ್ತೇನು ಮಾಡೋಕೆ ಆಗಿರಲಿಲ್ಲ. ತುಂಬಾ ಚಳಿ ಇತ್ತು ಹಾಗಾಗಿ...

ಬ್ಯಾಗಿನಲ್ಲಿ 2 ಪ್ಯಾಕೆಟ್ ಬಿಸ್ಕೆಟ್ ಇತ್ತು. ಬಿಸ್ಕೆಟ್ ಹಾಕಿದೆ. ಅವಳು ಅದನ್ನು ತಿಂದು ಬಾಲ ಅಲ್ಲಾಡಿಸಿಕೊಂಡು ಹೊರಟೇ ಹೋದ್ಲು... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ