ಸ್ಟೇಟಸ್ ಕತೆಗಳು (ಭಾಗ ೨೪೪) - ಅಸ್ಪೃಶ್ಯತೆ

ಸ್ಟೇಟಸ್ ಕತೆಗಳು (ಭಾಗ ೨೪೪) - ಅಸ್ಪೃಶ್ಯತೆ

ಪ್ರತಿಯೊಂದನ್ನು ಅನುಭವಿಸಿದವನಿಗೆ ಅದರ ಸ್ವಾದ ತಿಳಿಯುವುದು, ಅನುಭವಿಸಿದವನಿಗೆ ನೋವು ತಿಳಿಯುವುದು, ಅನುಭವಿಸಿದವನಿಗೆ ಭಯ-ಆತಂಕ ಪ್ರೀತಿ ಎಲ್ಲವೂ ತಿಳಿಯೋಕೆ ಸಾಧ್ಯ. ನಾನು ಪ್ರತಿದಿನ ಪುಸ್ತಕದಲ್ಲಿ ಒದುತ್ತಿದ್ದೆ, ಅವರನ್ನ ಹತ್ತಿರ ಸೇರಿಸಿಲ್ಲ, ಅವರನ್ನು ದೂರ ಕೂರಿಸಿದರು, ಅವರಿಗೆ ಒಳಗೆ ಪ್ರವೇಶವಿಲ್ಲ, ಅವರು ಊರ ಹೊರಗೆ ಇರಬೇಕು, ಬೇರೆಲ್ಲಿಯೂ ಕೇಳುತ್ತಿದ್ದೆ. ಆದರೆ ಸ್ವತಹ ಅನುಭವವಾದಾಗ ಎದೆ ಬಡಿತ ನಿಧಾನವಾಯಿತು. ಬೆವರು ಕಾರಣ ತಿಳಿಯೋಕೆ ಹೊರಬರುತ್ತಿತ್ತು. ಅವತ್ತು ತಿಂಡಿ ತಿಂತಾ ಇದ್ದೆ. ಪ್ರೀತಿಯಿಂದ ಸರಿ-ತಪ್ಪುಗಳನ್ನು ಹೇಳೋರು, ಒಂದಷ್ಟು ಹಾಸ್ಯ ಹರಟೆಗಳ ನಡುವಿನಲ್ಲಿ  ಬದುಕಿದವರರು, ಎಷ್ಟು ದಿನದವರೆಗೆ ಅಣ್ಣತಮ್ಮಂದಿರಂತೆ ಬರುತ್ತಾ ಇದ್ದವರು,ಯಾರು ಯಾರ ಜಾತಿ ಕುಲಗೋತ್ರಗಳನ್ನು ವಿಚಾರಿಸಿಲ್ಲ. ನಮ್ಮದು ನಾಟಕ ಕಟ್ಟುವ ಕೆಲಸ ಅವತ್ತು ವೃತ್ತಾಕಾರದಲ್ಲಿ ಎಲ್ಲರ ಮುಖ ನೋಡುತ್ತಾ ತಿಂಡಿ ತಿನ್ನುತ್ತಿದ್ದೆ ನನ್ನ ಪ್ಲೇಟ್ ಅಲ್ಲಿದ್ದ ಚಪಾತಿ ಖಾಲಿಯಾಗಿತ್ತು. ಪಕ್ಕದಲ್ಲಿದ್ದರಿಂದ ಚಪಾತಿ ತೆಗೆದು ತಿನ್ನಲಾರಂಬಿಸಿದೆ. ಪಕ್ಕದಲ್ಲಿದ್ದವರು ಮಾತನಾಡಲಿಲ್ಲ. ನೇರವಾಗಿ ಆ ಪ್ಲೇಟನ್ನು ಅಲ್ಲೇ ಬಿಟ್ಟು ಇನ್ನೊಂದು ಹೊಸ ಪ್ಲೇಟನ್ನು ತೆಗೆದುಕೊಂಡು ಅದರಲ್ಲಿ ಪ್ರತ್ಯೇಕವಾಗಿ ಚಪಾತಿಯನ್ನು ಹಾಕಿ ತಿನ್ನಲಾರಂಭಿಸಿದರು.

ಮತ್ತೆ ಮತ್ತೆ ಕಾಡುತ್ತಿತ್ತು ತಿಂದಿದ್ದರೆ ಏನಾಗುತ್ತಿತ್ತು? ನಾನೇನಾದರೂ ಆಚರಣೆಗೆ ತೊಂದರೆ ಮಾಡಿದರೆ ಕೆಟ್ಟದು. ಅಂತಹ ಕೆಲಸ ಮಾಡಿದೆನಾ ಇಲ್ಲವಲ್ಲ. ಮನುಷ್ಯ ಅಂತ ಮಾತಾಡೋದು ನಾವೇ, ಮನುಷ್ಯತ್ವ ಅಂತ ಪ್ರಬಂಧ ಬರೆಯುವುದು ನಾವೇ, ಜೊತೆಯಾಗಿ ಬದುಕಬೇಕು ಜೊತೆಯಾಗಿ ಅಂತ ಎಲ್ಲರೊಂದಿಗೆ ಮಾಹಿತಿ ಹಂಚುವರು ನಾವೇ ಹೀಗಿರುವಾಗ ತನ್ನದೇ ರೀತಿಯ ನವರಂದ್ರ, ಸಪ್ತಧಾತು, ಆಸೆ- ಆಮಿಷ, ರೋಷ- ಹರುಷಗಳು ಎಲ್ಲವನ್ನ ಹೊಂದಿರುವ ಎರಡು ದೇಹಗಳ ನಡುವೆ ಯಾವ ಅಡೆತಡೆಯ ಗೋಡೆಯೊಂದು ನಿರ್ಮಾಣವಾಗುತ್ತಿದೆ. ದೂರ ಚಲಿಸುವ ಮುನ್ನ ಒಮ್ಮೆ ಕೈಹಿಡಿದು ನಡೆದದ್ದನ್ನು ಜೊತೆಗೆ ಸಹಕರಿಸಿದ್ದನ್ನು ಯೋಚಿಸಿದರೆ ಭಾವ ಬೇದವಾಗುವುದಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ