ಸ್ಟೇಟಸ್ ಕತೆಗಳು (ಭಾಗ ೨೪೮) - ಕಪ್ಪುಗೆರೆ
ಹಸಿರಿನ ಚಿತ್ರದ ನಡುವೆ ಕಪ್ಪು ಗೆರೆಗಳನ್ನು ಊರಲ್ಲೆಲ್ಲಾ ಚಿತ್ರಿಸಲಾಗಿದೆ. ನಿಮಗಿದು ಕಾಣಬೇಕಾದರೆ, ನೆಲವನ್ನ ಬಿಟ್ಟು ಮೇಲೇಳಬೇಕು. ಆಗಸದಲ್ಲಿ ನಿಂತು ಕೆಳಗಿಣುಕಬೇಕು. ಪ್ರತಿ ಒಂದು ಕಪ್ಪು ಗೆರೆಗಳು ಒಂದನ್ನೊಂದು ಎಲ್ಲೋ ಒಂದು ಕಡೆ ಸಂದಿಸಿ ಕವಲುಗಳಾಗಿ ಒಡೆದು ಹಲವಾರು ಕಾಂಕ್ರೀಟ್ ಕಾಡುಗಳನ್ನು ಜೋಡಿಸುತ್ತವೆ. ಈ ಕಪ್ಪು ಗೆರೆಗಳಿಂದಲೇ ಊರು ದೊಡ್ಡದಾಗುತ್ತಿದೆ. ಕಟ್ಟಡಗಳು ಬೆಳೆಯುತ್ತಿವೆ. ಜನ ತಲುಪುತ್ತಿದ್ದಾರೆ. ಹಸಿರಿನ ನಡುವೆ ಕಪ್ಪು ಗೆರೆಗಳನ್ನು ಎಳೆದುದಕ್ಕೆ ಬೇಸರವಿಲ್ಲ. ಆದರೆ ಕಪ್ಪಿನ ಜಾಗದಲ್ಲಿ ತುಂಡರಿಸಿದ ಹಸಿರಿನ ಬಣ್ಣವನ್ನು ಇನ್ನೆಲ್ಲಾದರೂ ಜೋಡಿಸುವ ಕೆಲಸವನ್ನು ಮಾಡಬೇಕಿತ್ತು .ಒಂದಷ್ಟು ಸಮಯ ಕಪ್ಪಿನ ಮೇಲೆ ಓಡಾಡದೆ ನೋಡಿ ಅದು ಹಸಿರಾಗಿರುತ್ತದೆ ಅಂದರೆ ಮೂಲವಾಗಿ ಅದು ಹಸಿರಿನ ಜಾಗ, ನಾವು ಆಕ್ರಮಿಸಿಕೊಂಡಿದ್ದೇವೆ ಅನ್ನುವುದು ಸ್ಪಷ್ಟ. ನಾವು ಪಡೆದುಕೊಂಡ ಕಾರಣ ತಿರುಗಿ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನ ನಿಭಾಯಿಸುವವರು ನಾವಾಗಬೇಕು. ನಾವೆಲ್ಲಾ ನಮ್ಮ ಕಾಲ ಮೇಲೆ ನಿಂತಿದ್ದೇವೆ ಆದರೆ ನಮ್ಮ ನೆಲದ ಸಂಸ್ಕೃತಿಯ ಅಂತಃಸತ್ವದ ಬೇರುಗಳನ್ನು ಕಿತ್ತುಕೊಂಡು ನಮ್ಮದೇ ವಿನೂತನವಾದ ಶೈಲಿಯಲ್ಲಿ ನಿಲ್ಲುವುದು ತರವಲ್ಲ .ಈ ನೆಲಕ್ಕೊಂದು ಗಂಧವಿದೆ, ಅದಕ್ಕೊಂದು ಪಿಸುಗುಟ್ಟುವ ಹೊಸ ಭಾಷೆಯಿದೆ .ಅದನ್ನ ಕೇಳಿಸಿಕೊಂಡು ಹಂಚುವವರು ನಾವಾಗಬೇಕು. ಆಗ ಈ ನೆಲದ ಮೇಲೆ ಕಾಲಿಟ್ಟು ದಿನದೂಡುವುದಕ್ಕೆ ಅರ್ಥ ಸಿಗುತ್ತದೆ.
ಸುದ್ದಿ-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ