ಸ್ಟೇಟಸ್ ಕತೆಗಳು (ಭಾಗ ೨೪೯) - ಘಟನೆ

ಸ್ಟೇಟಸ್ ಕತೆಗಳು (ಭಾಗ ೨೪೯) - ಘಟನೆ

 "ನಿಮ್ಮ ಮಾತನ್ನು ನಾನು ಒಪ್ಪುವುದಿಲ್ಲ, ಇಷ್ಟು ವರ್ಷ ನಾವು ಮಾಡ್ತಾ ಇದ್ದೇವು, ನೀವೇನು ಬದಲಿಸುತ್ತೇನೆ ಅಂತ ಬಂದರಲ್ಲ? ರೋಡ್ ಕೆಲಸ 1 ಕೋಟೀಲಿ  ಆಗೋದನ್ನ 3 ಕೋಟಿಗೆ ಮಾಡಿದ್ದೀರಿ, ಅದಲ್ಲದೆ ಇನ್ನೂ ಕೆಲಸ ಮುಗಿದಿಲ್ಲ. ಹಣ ಎಲ್ಲಿಗೆ ಹೋಯಿತು"?

"ಹೌದು ಸರ್, ನೀವು 1 ಕೋಟೀಲಿ ಮುಗಿಸುತ್ತೀರಿ. ಮೇಲ್ಗಡೆ ಒಂದಷ್ಟು ಸಾರಿಸುವುದು ನಿಮ್ಮ ಕೆಲಸ. ನಮ್ಮದು ಹಾಗಲ್ಲವಲ್ಲ, ಸರಿಯಾಗಿ ಕೆಲಸ ಮಾಡ್ತೀವಿ. ಚೆಕ್ ಮಾಡಬಹುದು ಬೇಕಾದರೆ"

" ಹೌದು ,ಹೌದು ,ಹೌದು, ಡಗ್ ಡಗ್ ಡಗ್ "

" ಇದೊಂದೇ ಅಲ್ಲಾ ಇವರದ್ದು ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ. ಕರೆಂಟ್ ಕಂಬ ಸರಿ ಮಾಡ್ಸಕ್ಕೆ ದುಡ್ಡು ಬಂದಿದೆ, ಸರಿ ಮಾಡಿಸುವುದು ಕಾಣುತ್ತಾನೆ ಇಲ್ಲ? ಪಂಚಾಯತ್ ಕಟ್ಟಡ ಸೋರುತ್ತಿದೆ, ಸ್ಯಾಂಕ್ಷನ್ ಅದು ದುಡ್ಡು ಯಾರ ಮನೆಗೆ ಹೋಗಿದೆಯೋ"

" ಹೌದಪ್ಪ ಎಲ್ಲ ನಮ್ಮ ಮನೆಗಳಿಗೆ ಮಾತ್ರ ಬರೋದು? ಹೌದಪ್ಪ ಕಳೆದ ವರ್ಷ ಸ್ಯಾಂಕ್ಷನ್ ಆಗಿತ್ತು, ಆಗ ನೀವು ಅಧಿಕಾರದಲ್ಲಿ ಇದ್ರಿ. ಏನು ಮಾಡಿದ್ರಿ? ಎಷ್ಟು ನಿಮ್ಮ ಮನೆಗೆ ಹೋಯಿತು? ಒಟ್ಟಿನಲ್ಲಿ ಮತ್ತೆ ನಿಮಗೆ ದುಡ್ಡು ಮಾಡಬೇಕು ಕೆಲಸದ ಬಗ್ಗೆ ಯೋಚನೆಗಳೇ ಇಲ್ಲ"?

" ಹೌದು ,ಹೌದು ,ಹೌದು ,ಡಗ್ ಡಗ್ ಡಗ್"

" ಹೋಗು ಮಾರಾಯ"

 "ಏಕವಚನ ಯಾಕೆ ಬಳಸುತ್ತೀರಿ, ಗೌರವ ಕೊಡಿ "

"ನೀವು ಮಾಡೋ ಕೆಲಸಕ್ಕೆ ಗೌರವ ಬೇರೆ ಕೇಡು"

 "ಡಗ್ ಡಗ್ ಡಗ್"

 ಶಬ್ದಗಳೇ ಹೆಚ್ಚಾದವು, ಏನು ಅರ್ಥವಾಗ್ತಿಲ್ಲ. ನಾನು ರಸ್ತೆಯ ಬದಿ ನಿಂತಿದ್ದೆ ಕೋಣೆಯೊಳಗಿನಿಂದ ಬರೀ ಬೊಬ್ಬೆಗಳೇ ಕೇಳ್ತಾ ಇದ್ದವು. ಹೊರಗಡೆ ಎರಡು ಕಾರುಗಳ ಡ್ರೈವರ್ ಗಳು ಮಾತಾಡ್ತಿದ್ರು "ಪ್ರತಿ ತಿಂಗಳು ಮೀಟಿಂಗಿನಲ್ಲಿ ಇವರ ಬೊಬ್ಬೆ ಇದ್ದದ್ದೆ"

"ಇಬ್ಬರು ದುಡ್ಡು ಮಾಡೋರೇ, ಇಬ್ಬರಲ್ಲಿ ಯಾರು ಜಾಸ್ತಿ ಮಾಡ್ತಿದ್ದಾರೆ ಅನ್ನೋದೆ ಯೋಚನೆ. ಮೀಟಿಂಗ್ನಲ್ಲಿ ಹಾರಾಟ, ಹೊರಗಡೆ ಕೂತು ಮತ್ತೆ ಅವರದೇ ಮಾತುಕತೆ"

" ನೋಡಿದವರು ಮಾತ್ರ ಮಂಗಗಳು"

" ವೋಟು ಹಾಕುವಾಗ ಜನ ಯಾಕೆ ಇಂಥವರನ್ನು ಆರಿಸುತ್ತಾರೆ"

" ಬೇರೆಯವರ ಸಿಗೋದಿಲ್ಲ ಏನು"

ಒಂದು ಘಟನೆಯ ಎರಡು ಮುಖಗಳು ಒಂದೇ ಸ್ಥಳದಲ್ಲಿ ಕಾಣಸಿಕ್ಕಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ