ಸ್ಟೇಟಸ್ ಕತೆಗಳು (ಭಾಗ ೨೪) - ನೆಲದ ಉಸಿರಾಟ

ಸ್ಟೇಟಸ್ ಕತೆಗಳು (ಭಾಗ ೨೪) - ನೆಲದ ಉಸಿರಾಟ

ನಾನು ದಿನವೂ ನೆಲದ ಮೇಲೆ ಚಲಿಸೋನು. ಒಂದು ದಿನವೂ ಮಣ್ಣಿನ ಅಂದರೆ ನೆಲದ ಮಾತನ್ನ ಕೇಳಿರಲಿಲ್ಲ‌. ಅದರ ನೋವನ್ನು ಅರಿತಿರಲಿಲ್ಲ. ಕಾಲು ಚಪ್ಪಲಿ ಧರಿಸಿತ್ತಲ್ವಾ! ಗುರುತಿಲ್ಲದ ಊರಿಗೆ ಆ ದಿನ ತಲುಪಿದ್ದೆ. ನಿಲ್ಲುವ ಜಾಗ ಗೊತ್ತಿಲ್ಲದ ಕಾರಣ ದೇಹದ ಸುಸ್ತಿಗೆ ಒಂದು ಮರದ ಬುಡವೇ ಆಶ್ರಯ ತಾಣವಾಯಿತು. ಅಲ್ಲೇ ಒರಗಿದವನಿಗೆ ನೆಲವೇ ಹಾಸಿಗೆಯಾಯಿತು. ನೆಲದ ಉಸಿರಾಟ ನನ್ನೊಳಗೆ ಹೊಸತೊಂದು ಕಂಪನವನ್ನು ಹುಟ್ಟಿಸಿತು. ಹೃದಯದ ಪಿಸುಮಾತು ನನ್ನೊಳಗೆ ಇಳಿಯಿತು. ನೆಲ ಮಾತಾಡಿತು" ಮಗು ನನಗೆ ಉಸಿರಾಡೋಕೆ ತುಂಬಾ ಕಷ್ಟವೆನಿಸುತ್ತದೆ. ನಾನು ನನ್ನ ಉಸಿರಾಟಕ್ಕೆ ಹಸಿರನ್ನೇ  ಅವಲಂಬಿಸಿದ್ದೇನೆ. ಹಸಿರು ನನ್ನೊಳಗೆ ಬೇರಿಳಿಸಿ ಮೇಲೇರಿದ ಹಾಗೆ ನಾನು ಉಸಿರೆಳೆದುಕೊಂಡು ನಿರಮ್ಮಳನಾಗುತ್ತೇನೆ. ಗದ್ದೆ ತೋಟ ಕಾಡು ಎಲ್ಲವೂ ಹಸಿರನ್ನೇ ಹೊದ್ದಿವೆ. ಗದ್ದೆಗೆ ಯಂತ್ರ ಇಳಿದು ನೋವು ಕೊಟ್ಟರು, ಹಸಿರು ಮೇಲೆ ಏಳುತ್ತಿತ್ತಲ್ಲ ಅನ್ನೋದೇ ನೆಮ್ಮದಿ. ಆದರೆ ಗದ್ದೆಗೆ ಮತ್ತಷ್ಟು ಎಲ್ಲಿಂದಲೋ ತಂದು ಕೆಂಪು ಮಣ್ಣು ಸುರಿದು ಕಾಂಕ್ರೀಟನ್ನು ಏರಿಸಿದರು. ಕಾಡನ್ನು ಬೋಳಾಗಿಸಿದರು. ನನ್ನೊಡಲ ತಂಪನ್ನೀಯುತ್ತಿದ್ದ ನದಿಯನ್ನ ಕೆರೆ ಹಳ್ಳ ತೊರೆಗಳನ್ನ ಬತ್ತಿಸಿದರು. ನನ್ನ  ಬಾಯಾರಿಕೆಗೆ ನೀರೆ ಸಿಗದಾಗಿದೆ. ನನ್ನ ನೋವಿಗೆ ಸ್ಪಂದಿಸಿ ಮಳೆರಾಯ ಕಾಲಿಟ್ರು ನಿಮ್ಮ ಕಾಂಕ್ರೀಟು ನನ್ನೊಳಗೆ ಇಳಿಯದ ಹಾಗೇ ಮಾಡುತ್ತಿದೆ. ನಾನು ಹೇಗೆ ಬದುಕಲಿ? ಉಸಿರಾಡಲು ಒದ್ದಾಡುತ್ತಿದ್ದೇನೆ‌. ತಾಳುವಷ್ಟು ದಿನ ತಾಳುತ್ತೇನೆ. ಆಗದಿದ್ರೆ ಉರುಳುತ್ತೇನೆ. ನನಗೆ ಬೇಕಾದ ಉಸಿರನ್ನು ಪಡೆದುಕೊಳ್ಳುತ್ತೇನೆ. ನಾನು ಉಸಿರು ಸಿಗದೇ ಸತ್ರೆ ನೀನೇನು ಬೆಳೆಯುತ್ತೀಯಾ? ಮುಂದೊಂದಿನ ನಿನ್ನ ಉಸಿರಿಗೆ ಜಾಗ ಎಲ್ಲಿದೆ? ನೀನು ಬಂದು ನನ್ನೊಡಲೇ ಸೇರಬೇಕಲ್ವಾ ? ಮತ್ತೆ ನನ್ನನ್ನ ದೂರಬೇಡ. ನನ್ನ ಉಸಿರನ್ನು ನಿಲ್ಲಿಸಬೇಡ". ಎಚ್ಚರವಾಯಿತು. ಆ ಮಾತು ನನ್ನೊಳಗೆ ಪ್ರತಿಧ್ವನಿಸುತ್ತಿತ್ತು " ನೆಲ ಉಸಿರಾಡುತ್ತಿದೆ"

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ