ಸ್ಟೇಟಸ್ ಕತೆಗಳು (ಭಾಗ ೨೫೧) - ಬೇಡಿಕೆ

ಸ್ಟೇಟಸ್ ಕತೆಗಳು (ಭಾಗ ೨೫೧) - ಬೇಡಿಕೆ

ಅಜ್ಜಿಯ ಕತೆ ಹೇಳ್ತಾ ಇದ್ರು." ಒಂದು ಊರಿನಲ್ಲಿ ದೊಡ್ಡಮನೆ. ಮನೆಯೇನೋ ದೊಡ್ಡದು ಆದರೆ ಅವರ ಮನಸ್ಸಲ್ಲ. ಅವರ ಮನೆಯಲ್ಲಿ ಕೆಲಸ ಮಾಡೋ ಹುಡುಗಿ ಇದ್ಲು . ಅವಳಿಂದ ಕೆಲಸ ತುಂಬಾ ಮಾಡಿಸ್ಕೊಳ್ತಾ ಇದ್ದರು. ಆದರೆ ತಿನ್ನೋಕೆ ಏನು ನೀಡುತ್ತಿರಲಿಲ್ಲ. ಆಗಾಗ ಅವಳಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಾ ಇತ್ತು ಕಾರಣ ಏನು ಅಂತ ಅಂದರೆ ಅವರ ಮನೆಯಲ್ಲಿರುವ ದೀಪದ ಬೆಳಕಿಗೆ ಒಂದಷ್ಟು ಹುಳಗಳು ಹಾರಿಕೊಂಡು ಬರ್ತಾ ಇತ್ತು. ಬಡಿಸಿ ಇಟ್ಟಿದ್ದ ಅನ್ನದ ಮೇಲೆ ಬಂದು ಬೀಳುತ್ತಿದ್ದವು.ಅನ್ನವನ್ನು ಚೆಲ್ಲುವುದಕ್ಕಿಂತ ಇವಳಿಗೆ ನೀಡುವುದು ಒಳ್ಳೆಯದು ಅಂದುಕೊಂಡು  ನೀಡ್ತಿದ್ರು. ಹಾಗಾಗಿ ಇವಳಿಗೆ ಆಗಾಗ ಹೊಟ್ಟೆ ತುಂಬುತ್ತಿತ್ತು. ದೇವರಲ್ಲಿ ಪ್ರತಿದಿನವೂ  ಬೇಡುತ್ತಿದ್ದಳು ದೇವರೇ ಆ ಹುಳವನ್ನು ಪ್ರತಿದಿನವೂ ಕಳುಹಿಸು ಹಾಗೆ ಬೀಳುತ್ತಿದ್ದರೆ ನನಗೆ ಹೊಟ್ಟೆ ತುಂಬುತ್ತೆ ಅಂತ. " ಅಜ್ಜಿ ಕಥೆ ನಿಲ್ಲಿಸಿದರು. ನಾನು ಮನೆಯಿಂದ ಹೊರಗಡೆ ಬಂದು ಕೈಮುಗಿದು ದೇವರಲ್ಲಿ ಪ್ರಾರ್ಥಿಸಿದೆ "ದೇವರೇ ವರ್ಷಕ್ಕೆ ನಾಲ್ಕು ಸಲ ದೊಡ್ಡ ರಾಜಕಾರಣಿಯೊಬ್ಬ ಊರಿಗೆ ಬರಲಿ, ಊರಿನ ದೊಡ್ಡ ದೇವಸ್ಥಾನದ ಜಾತ್ರೆಯಾಗಲಿ, ಉತ್ಸವಗಳಾಗಲಿ, ಹಬ್ಬಗಳಾಗಲಿ, ಚುನಾವಣೆ ಬರಲಿ" ಅಂತ ಕಾರಣ ಏನು ಅಂದರೆ ಈ ಕಾರಣಗಳಿಗೆ ಮಾತ್ರ ನಮ್ಮೂರಿನ ರಸ್ತೆ ಸರಿಯಾಗುತ್ತೆ, ನೆಲ ಸ್ವಚ್ಛವಾಗುತ್ತದೆ, ಚರಂಡಿಗಳು ನೀರು ಹರಿಯೋಕೆ ತಯಾರಾಗುತ್ತೆ. ಊರು ಮಿನುಗುತ್ತದೆ. ನಮ್ಮ ಮಾತಿಗೆ ಬೇಡಿಕೆ ಇಲ್ಲ, ಬೇರೆ ಮಾರ್ಗದಲ್ಲಾದರೂ ಒಳಿತಾಗಲಿ ಅಂತ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ