ಸ್ಟೇಟಸ್ ಕತೆಗಳು (ಭಾಗ ೨೫೨) - ಹಿಂತಿರುಗಿ ನೋಡು

ಸ್ಟೇಟಸ್ ಕತೆಗಳು (ಭಾಗ ೨೫೨) - ಹಿಂತಿರುಗಿ ನೋಡು

ಅಜ್ಜನ ಜೊತೆ ಎಲ್ಲಿ ನಡೆಯುವಾಗಲೂ ಅಜ್ಜ ಹೇಳುತ್ತಿದ್ದದ್ದು ಒಂದೇ ಮಾತು ಒಮ್ಮೆ ನಿಂತು ಹಿಂದೆ ನೋಡಿ ಮತ್ತೆ ಮುಂದೆ ಹೆಜ್ಜೆ ಇರಿಸೂ ಅಂತ. ನಾನು ತುಂಬಾ ಸಲ ಕೇಳಿದ್ದೇನೆ ಆದರೆ ಹಿಂದೆ ಯಾಕೆ ನೋಡಬೇಕು? ನಾನು ಹೋಗೋ ದಾರಿ ಮುಂದೆ ಇರುವುದು. ನನಗೆ ಎಲ್ಲಿಗೆ ಹೋಗಬೇಕು ಅಂತ ಗೊತ್ತಿದೆ. ದಾರಿ ಪರಿಚಯವಿಲ್ಲದಿರೆ ಪರಿಚಯ ಮಾಡ್ಕೋತೇನೆ. ಹಿಂದಿನ ದಾರಿ ನೋಡಿ ನನಗೆ ಏನಾಗಬೇಕು ಅರ್ಥನೇ ಆಗ್ತಾ ಇರ್ಲಿಲ್ಲ. ಅದಕ್ಕೆ ಕೇಳಲೇಬೇಕು ಅಂತ ಅವತ್ತು ಗದ್ದೆ ಬದಿಯಲ್ಲಿ ಹೋಗುವಾಗ ಅಜ್ಜನಲ್ಲಿ ಕೇಳಿದೆ " ನೋಡು ಇದಕ್ಕೆ ನನ್ನಲ್ಲಿ ನಿನಗೆ ಹೇಳುವಷ್ಟು ದೊಡ್ಡ ಮಾತುಗಳಿಲ್ಲ. ನೀನು ಹೆಜ್ಜೆಗಳನ್ನ ಇಡಬೇಕಾಗಿರುವುದು ನಿಜ. ಆದರೆ ಹಿಂದೆ ಒಮ್ಮೆ ನಿಂತು ತಿರುಗಿ ನೋಡುವುದರಿಂದ ಆಗುವ ಲಾಭವೇನೆಂದರೆ, ನೀನು ಬಂದಿರುವ ಹಾದಿಯಲ್ಲಿ ಏನಾದರೂ ಬದಲಾವಣೆ ಆಗಿದ್ಯಾ ನೋಡು, ನೀನು ದಾಟಿರುವ ಹಾದಿ ಯಾರಿಗಾದರೂ ನೋವು ಕೊಟ್ಟಿದ್ಯಾ ನೋಡು, ನೀನು ಸಾಗಿ ಬಂದ ಹಾದಿ ತನ್ನತನವನ್ನು ಉಳಿಸಿಕೊಂಡಿದೆ ಅನ್ನೋದನ್ನು ಖಾತ್ರಿ ಪಡಿಸುಕೋ, ಅವೆಲ್ಲವೂ ಹಾಗೆ ಇದೆ ಅನ್ನೋದಾದರೆ ಮತ್ತೆ ಮುಂದೆ ಹೆಜ್ಜೆ ಇರಿಸು. ಹಿಂದಿನ ಯಾವುದಾದರೂ ಕೆಲವು ತಿರುವುಗಳ ಪಾಠಗಳು ಮುಂದಿನ ತಿರುವಿಗೆ ಉಪಯೋಗವಾಗಬಹುದು.ಅದರ ನೆನಪು  ಮುಂದಿನ ತಿರುವಿಗೆ ಉಪಯೋಗವಾಗಬಹುದು. ನಾವೆಲ್ಲರು ಹೊಸತನ ಬಯಸುವರು. ಅದಕ್ಕಾಗಿ ದೇವರಿಗೆ ಮೊದಲೇ ಗೊತ್ತಿದ್ದ ಕಾರಣ ಹಗಲು ಮತ್ತು ರಾತ್ರಿಯನ್ನು ನೀಡಿದ್ದಾನೆ. ಇಲ್ಲದಿರೆ ಜೀವನವೇ ಬೇಡ ಅನಿಸ್ತಾ ಇತ್ತು. ಹಾಗಾಗಿ ಒಮ್ಮೆ ನಿಂತ್ಕೋ ಹಿಂದೆ ತಿರುಗಿ ನೋಡು ಮತ್ತೆ ಹೆಜ್ಜೆ ಹಾಕು ". ಅಜ್ಜನ ಮಾತು ಹೌದೆನ್ನಿಸಿತು. ಅದಕ್ಕಾಗಿ ಒಮ್ಮೆ ನಿಂತು ಹಿಂದೆ ತಿರುಗಿ ನೋಡಿದೆ. ತುಂಬಾ ದಾರಿ ಬದಲಿಸಿ ಬದಲಿಸಿ ಇಲ್ಲಿಗೆ ಬಂದಿದ್ದೆ. ಇಲ್ಲಿಗೆ ತಲುಪುವ ಯಾವ ಯೋಚನೆಯೂ ಇರಲಿಲ್ಲ. ಮುಂದಿನ ಹೆಜ್ಜೆ ಇರಿಸುವಾಗ ಎಲ್ಲಿಗೆ ತಲುಪಬೇಕು ಎನ್ನುವ ಕನಿಷ್ಠ ಪ್ರಜ್ಞೆ ಇಟ್ಟುಕೊಂಡು ತಲುಪಬೇಕು ಅನ್ನೋದು ಇವತ್ತಿಗೆ ತಿಳಿಯಿತು....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ