ಸ್ಟೇಟಸ್ ಕತೆಗಳು (ಭಾಗ ೨೫೪) - ಕಣ್ಣಿನ ಮಾತು

ಸ್ಟೇಟಸ್ ಕತೆಗಳು (ಭಾಗ ೨೫೪) - ಕಣ್ಣಿನ ಮಾತು

ಇತ್ತೀಚಿಗೆ ಕೆಲದಿನಗಳಿಂದ ಬಾಯಿ ಮಾತುಗಳನ್ನೇ ಕೇಳುತ್ತಾ ಇದ್ದೆ. ಬಾಯಿ ಮಾತಾಡ್ತಾ ಇತ್ತು. ನನ್ನ ಕಿವಿ ಕೇಳಿಸಿಕೊಳ್ಳುತ್ತಾ ಇತ್ತು. ಕಣ್ಣು ಮಾತಾಡೋದನ್ನ ಕೇಳಿಸಿಕೊಳ್ಳುವಷ್ಟು ವ್ಯವಧಾನವಿರಲಿಲ್ಲ. ಇವತ್ತು ಊರ ಜಾತ್ರೆಯಲ್ಲಿ ಒಂದು ಮೂಲೆಯಲ್ಲಿ ನಿಂತು ಸುಮ್ಮನೆ ಕಣ್ಣುಗಳನ್ನು ಗಮನಿಸುತ್ತಿದೆ. ಆಸೆಯ ಕಣ್ಣುಗಳು ಒಂದಿಷ್ಟು ಓಡಾಡ್ತಾ ಇದ್ದವು. ಒಂದು ಆಸೆಯ ಕಣ್ಣು ಈ ದಿನ ಮಾರಾಟಕ್ಕೆ ತಂದಿರುವ ಕೊಳಲು, ಪೀಪಿ, ಆಟಿಕೆ ಸಾಮಾನುಗಳನ್ನ ಯಾರಾದರೂ ಆಸಕ್ತಿಯಿಂದ ಖರೀದಿಸಿದ್ದರೆ ಮನೆಯ ಹೊಟ್ಟೆ ತುಂಬೋಕೆ ದುಡ್ಡು ಸಿಗಬಹುದೆಂದು ಕಾಯುತ್ತಿತ್ತು. ಇನ್ನೊಂದು ಕಣ್ಣು ಹೂವು, ಹಣ್ಣು, ಪೂಜಾ ವಸ್ತುಗಳನ್ನು ಖರೀದಿಸುವವರು ಯಾರು ಎಂದು ದೂರದಿಂದಲೇ ಬರುವವರನ್ನು ನಿರೀಕ್ಷಿಸುತ್ತಿತ್ತು. ಒಂದು ಕಣ್ಣು ಈ ದಿನ ನನಗೆ ಯಾರಾದರೂ ಇಲ್ಲಿರುವ ಐಸ್ಕ್ರೀಮ್ ತೆಗೆಸಿ ಕೊಡಬಹುದೇ, ನನ್ನಲ್ಲಿ ದುಡ್ಡಿಲ್ವಲ್ಲ ಅನ್ನೋದನ್ನ ಅಕ್ಕಪಕ್ಕ ನಿಂತು ಗಮನಿಸ್ತಾ ಇತ್ತು. ಮಧ್ಯಾಹ್ನ ಊಟ ಇತ್ತು, ರಾತ್ರಿನೂ ಸಿಗಬಹುದಾ ಅಂತ ಇನ್ನೊಂದು ಕಣ್ಣು ಗಮನಿಸಿದರೆ, ಅವಳು ತುಂಬಾ ಚೆನ್ನಾಗಿ ಕಾಣುತ್ತಿದ್ದಾಳೆ ದೂರದಿಂದ ನನ್ನನ್ನೇ ನೋಡುತ್ತಾ ಇದ್ದಾಳೆ ನಿಜವಾಗಿಯೂ ನನ್ನನ್ನೆ ನೋಡುತ್ತಾ ಇರೋದಾ ಅಂತ ಇನ್ನೊಂದು ಕಣ್ಣು ಗಮನಿಸುತ್ತಿತ್ತು. ನನ್ನ ಜೊತೆ ಇರುವ ನನ್ನ ಹೆಂಡತಿಯನ್ನು ಯಾರಾದರೂ ಬೇರೆ ದೃಷ್ಟಿಯಿಂದ ನೋಡುತ್ತಿದ್ದಾರೆಯೇ ಅಂತ ಒಂದು ಕಣ್ಣು ಗಮನಿಸಿದರೆ, ಈಗಷ್ಟೇ ನನ್ನ ಗಂಡನ ಜೊತೆ ಮಾತನಾಡಿದ ಆ ಹುಡುಗಿ ಯಾರು ಅನ್ನುವ ಪ್ರಶ್ನೆ ಇನ್ನೊಂದು ಕಣ್ಣಲ್ಲಿ ಇತ್ತು. ಎಲ್ರೂ ಮಾಸ್ಕ್ ಹಾಕಿ, ಈಗ ಎಸ್.ಐ ಬಂದರೆ ಏನು ಹೇಳುತ್ತಾರೆ ಅನ್ನೋ ಪ್ರಶ್ನೆಯನ್ನ ಪೋಲಿಸ್ ಕಣ್ಣುಗಳು ಹೇಳುತ್ತಿತ್ತು. ದೇವರೇ ಎಲ್ಲರಿಗೂ ಒಳ್ಳೆಯದಾಗಲಿ ಅಂತ ಒಂದು ಕಣ್ಣು ಹೇಳಿದರೆ, ನಂಬಿದವರಿಗೆ ಯಾವತ್ತೂ ಇಂಬು ಕೊಡುತ್ತೇನೆ ಅಂತ ದೈವದ ಕಣ್ಣು ಹೇಳುತ್ತಿತ್ತು. ಮಳೆ ಒಂದು ಬರದೇ ಇರ್ಲಪ್ಪ ಅಂತ ಮುಗಿಲ ಕಡೆಗೆ ನೋಡಿದ ಕಣ್ಣು ಹೇಳಿದರೆ, ನನ್ನ ಚಪ್ಪಲಿನಾ ಯಾರು ಕದಿಯೋದಿಲ್ವಲ್ಲಾ  ಅಂತ ಒಂದು ಕಣ್ಣು ಆಗಾಗ ತಿರುಗಿ ನೋಡುತ್ತಾ ಇತ್ತು. ಕಣ್ಣುಗಳು ಬಾಯಿಗಿಂತ ಜಾಸ್ತಿ ಮಾತಾಡುತ್ತವೆ ಅಂತ ಸುಮ್ಮನೆ ನಿಂತ ನನ್ನ ಕಣ್ಣಿಗೆ ಕಂಡಿತು. ಹಾಗಾಗಿ ನಾನು ನಿರ್ಧಾರ ಮಾಡಿದೆ ಬಾಯಿ ಮಾತಿಗಿಂತ ಒಂದಷ್ಟು ಕಣ್ಣುಗಳನ್ನು ಮಾತನಾಡಿಸಿದರೆ ಇನ್ನಷ್ಟು ಸಂಬಂಧ ಗಟ್ಟಿಯಾಗಬಹುದು ಅಂತ ನೀವೇನಂತೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ