ಸ್ಟೇಟಸ್ ಕತೆಗಳು (ಭಾಗ ೨೫೭) - ಕೊನೆ ಕ್ಷಣ
ಮನೆಯೊಳಗಿನ ಗಡಿಯಾರ ತನ್ನ ಸೆಕುಂಡುಗಳ ಮುಳ್ಳುಗಳನ್ನು ಕ್ಷಣಕ್ಷಣಕ್ಕೂ ಬದಲಾಯಿಸಿದ ಹಾಗೆ ಸುತ್ತಮುತ್ತವೂ ಬದಲಾವಣೆಗಳು ಘಟಿಸುತ್ತಿರುತ್ತವೆ. ಆ ಮನೆಯೊಳಗಿನ ಗಡಿಯಾರದ ಮುಳ್ಳು ಒಂದು ಕ್ಷಣ ಸ್ತಬ್ಧವಾಗಿ ಮುಂದುವರಿಯಿತು. ಮುಖ ತೊಳೆಯುತ್ತಿದ್ದ ಸತೀಶನ ಎದೆಬಡಿತ ನಿಂತುಹೋಗಿತ್ತು. ದೇಹ ನೆಲಕ್ಕೆ ಜಾರಿತು. ಗಾಬರಿಯಿಂದ ಮನೆಯವರು ಧಾವಿಸಿದರು. ಚೆಲ್ಲಿದ ಉಸಿರನ್ನು ಮತ್ತೆ ದೇಹದೊಳಕ್ಕೆ ತುಂಬಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಎರಡು ದಿನಗಳ ಹಿಂದೆ ಆರಂಭವಾದ ಸಣ್ಣ ಜ್ವರಕ್ಕೆ ಮದ್ದು ತರೋಕೆ ಹಿಂದಿನ ದಿನ ಹೊರಡುವವರಿದ್ದರು ಸತೀಶ. ಬೆಳಗ್ಗೆ ಏಳುವಾಗ ಸಣ್ಣ ಸುಸ್ತು ಇವತ್ತು ಬೇಡ ನಾಳೆ ಹೋಗೋಣ ಅಂತ ನಿರ್ಧರಿಸಿಯಾಗಿತ್ತು. ಮನೆಯವರು ಹೋಗಿ ಎಂದರು "ತೊಂದರೆಯಿಲ್ಲ" ಅನ್ನುವ ಮಾತು ಅವರ ಬಾಯಿಂದ ಬಂದಿತ್ತು. ಬೆಳಗಾಯಿತು ಮರುದಿನ. ಸೂರ್ಯ ಕೆಲಸ ಆರಂಭಿಸಿ ಸ್ವಲ್ಪ ಹೊತ್ತಾಗಿತ್ತು. ಗಡಿಯಾರದ ಶಬ್ದ ನಿಂತಾಗ ಹೃದಯ ಬಡಿತವು ನಿಂತಿತು. ಪ್ರತಿದಿನವೂ ಕೂಗಿ ಕರೆದಾಗ ಓ ಎಂದು ಬಳಿಗೆ ಬರುತ್ತಿದ್ದ ಅಪ್ಪನನ್ನು ಕಳೆದುಕೊಂಡಾಗಿತ್ತು. ಮತ್ತಷ್ಟು ಕರೆದರೂ ಬಾರದ ಲೋಕಕ್ಕೆ ಚಲಿಸಿಯಾಗಿತ್ತು. ಅರಿವಿರಲಿಲ್ಲ ಯಾರಿಗೂ ಮುಂದಿನ ಕ್ಷಣದಲ್ಲಿ ಏನಾಗಬಹುದು ಎಂಬುದು, ಸ್ವತಹ ಸತೀಶನಿಗೂ ಯೋಚನೆ ಇರಲಿಲ್ಲ.
ಗದ್ದೆಯಲ್ಲಿ ಚಿತೆ ಉರಿಯುತ್ತಿದೆ, ಮನೆಯಲ್ಲಿ ಮೌನ ಉರಿಯುತ್ತಿದೆ. ಹಾಗಿದ್ದರೆ ಹೋಗಿದ್ದರೆ ಸುದ್ದಿಗಳು ಓಡಾಡುತ್ತಿವೆ. ಅಲ್ಲಿದ್ದ ಒಂದಷ್ಟು ಮನಸ್ಸುಗಳು ಪಾಠವೊಂದನ್ನು ಪಡೆದುಕೊಂಡು ಮನೆ ಸೇರಿದ್ದವು. ಕ್ಷಣಿಕವೀ ಜೀವನ ...ಪ್ರೀತಿಸು ಎಲ್ಲರನ್ನು ...ದ್ವೇಷವನ್ನು ಸುಟ್ಟಾಕಿ... ಅಸೂಯೆಯನ್ನು ಬಿಟ್ಟಾಕಿ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ