ಸ್ಟೇಟಸ್ ಕತೆಗಳು (ಭಾಗ ೨೫೯) - ಅಜ್ಜ ಹುಟ್ಟಿದ್ರು
ಮನೆಯಲ್ಲಿ ಅಜ್ಜ ಹುಟ್ಟಿದ್ರು. ಅವತ್ತು ಮದ್ಯಾಹ್ನದ ಖಾರ ಬಿಸಿಲು ನೆರಳಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿತ್ತು. ಮದ್ಯಾಹ್ನ ಕೆಲಸಕ್ಕೆ ಚೂರು ವಿರಾಮ ಪಡೆಯಲು ಗಾಳಿ ನಿದಾನವಾಗಿ ಬೀಸುತ್ತಿತ್ತು. ವಾತಾವರಣದಲ್ಲಿ ಹೊಸತನವೇನೂ ಇರಲಿಲ್ಲ. ದಿನವೂ ಕಾಣುವಂತಹುದೇ, ಆಗ ನಮ್ಮ ಮನೆಯಲ್ಲಿ ಅಜ್ಜ ಹುಟ್ಟಿದ್ರು. ಜೊತೆಗೆ ಅಮ್ಮ ಅಪ್ಪನೂ ಹುಟ್ಟಿದ್ರು. ಪಕ್ಕದೂರಿನಲ್ಲಿ ಚಿಕ್ಕಪ್ಪ- ಚಿಕ್ಕಮ್ಮ, ಬಾಂಬೆಯಲ್ಲಿ ದೊಡ್ಡಪ್ಪ ದೊಡ್ಡಮ್ಮ ,ಹೀಗೆ ಎಲ್ಲಾ ಊರುಗಳಲ್ಲಿ ಸಂಬಂಧದ ಕೊಂಡಿಗಳ ಜನನವಾಯಿತು. ಎಲ್ಲರಿಗೂ ಸಂಭ್ರಮ. ನಮ್ಮಮ್ಮನೇ ಕುಟುಂಬದ ದೊಡ್ಡ ಮಗಳು. ನಾನು ಜನನವಾದಾಗಲೇ ಮೇಲಿನವರೆಲ್ಲಾ ಹುಟ್ಟಿದ್ದು. ನಾನು ಹುಟ್ಟಿದ್ದರಿಂದಲೇ ಇವರಿಗೆ ಈ ಪದವಿ ದೊರೆತದ್ದು.
ಮನೆಯೊಂದರ ಮೊದಲ ಕೂಸು ಜನಿಸಿದಾಗ ಮಗುವಿನೊಂದಿಗೆ ಸಂಬಂದಗಳು ಹುಟ್ಟುತ್ತವೆ. ಅದಕ್ಕೆ ಹೇಳಿದ್ದು ನಮ್ಮ ಮನೆಯಲ್ಲಿ ಅಜ್ಜ ಹುಟ್ಟಿದ್ರು ಅಂತಾ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ