ಸ್ಟೇಟಸ್ ಕತೆಗಳು (ಭಾಗ ೨೬೦) - ಪುಟ್ಟ ಪಾದ
ಕಳೆದುಕೊಂಡ ಸುಂದರತೆಯು ಯೋಚನಾಲಹರಿಯನ್ನು ಮತ್ತೆ ಮತ್ತೆ ಎಬ್ಬಿಸಿ ಕಲ್ಪನೆಯ ಖುಷಿಯನ್ನು ಇಮ್ಮಡಿಗೊಳಿಸಿದೆ. ಊರು ದಾಟುವುದಕ್ಕೆ ಬಸ್ಸನ್ನೇರಿದ್ದೆ. ಖಾಲಿ ಇದ್ದ ಕೊನೆಯ ಸೀಟು ನನಗಾಗಿ ಕಾಯುತ್ತಿತ್ತು. ಕುಳಿತಾಗ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಮಲಗಿದ್ದ ಪುಟ್ಟ ಚಪ್ಪಲಿಯೊಂದು ಕಾಣಿಸಿತು. ಅದು ಕಾಯುತ್ತಿತ್ತು ಇಷ್ಟರವರೆಗೆ ಅಪ್ಪಿ ಹಿಡಿದಿದ್ದ ಪುಟ್ಟ ಪಾದವನ್ನು. ಅದನ್ನ ತಯಾರಿಸಿದವರು ತುಂಬಾ ನಾಜೂಕಾಗಿ ತಯಾರಿಸಿದ್ದಾನೆ. ಸಣ್ಣ ಮುತ್ತುಗಳನ್ನು ಪುಟ್ಟದಾಗಿ ಜೋಡಿಸಿ ಇನ್ನೊಂದಷ್ಟು ಮೆರಗು ತುಂಬಿದ್ದಾನೆ.
ಈ ಬಸ್ಸಿನಲ್ಲಿ ಯಾವುದೇ ಮಗುವಿನ ಕಾರಣ ಆ ಚಪ್ಪಲಿ ಧರಿಸಿದ ಮಗು ಬಸ್ಸಿಳಿದು ಹೋಗಿದೆ ಅನ್ನೋದು ಖಾತ್ರಿಯಾಯಿತು. ಒಂದರಿಂದ ಎರಡು ವರ್ಷವಿರಬಹುದು. ಚಪ್ಪಲಿ ಇಲ್ಲದ ಮುದ್ದು ಪಾದ ಇನ್ನೆಷ್ಟು ಹೊಳೆಯುತ್ತಿರಬಹುದು. ಮೃದು ಬೆರಳುಗಳು ಬಿಸಿಲಿಗೆ ಮೈಯೊಡ್ಡಿರಬಹುದು?
ಬರಿಯ ಪಾದ, ಪಕ್ಕದ ಪಾದವನ್ನು ನೋಡಿ ಮುಸಿಮುಸಿ ನಗುತ್ತಿರಬಹುದು. ಚಪ್ಪಲಿ ಇಲ್ಲದ ಎಡಗಾಲಿನ ಪುಟ್ಟ ಪಾದ ತಾಯಿಯ ಬೆನ್ನನ್ನು ಆಗಾಗ ಬಡಿಯುತ್ತಿರಬಹುದು. ಗೆಜ್ಜೆಗಳು ನಿನಾದ ಮಾಡುತ್ತಾ ನೋಡುಗರ ಕಣ್ಣಿಗೆ ಬೆಳಕನ್ನ ಸೂಸುತ್ತಿರಬಹುದು. ಇಲ್ಲಿ ಚಪ್ಪಲಿ ಏಕಾಂಗಿಯಾಗಿದೆ ಅಲ್ಲಿ ಪಾದ ನಗುತ್ತಿದೆ. ಖುಷಿ ಅನುಭವಿಸುವ ಪಾದವು ನೆಲಕ್ಕೂರುವಾಗ ನೋವ ಅನುಭವಿಸಬಹುದು. ಚಪ್ಪಲಿ ಕಾಯುತ್ತಿದೆ ಮುದ್ದು ಪಾದವನ್ನು ಆಲಂಗಿಸಲು. ದಿಕ್ಕು ಬದಲಿಸಿದ ಪಯಣವಾದ ಕಾರಣ ಮತ್ತೆ ಸೇರುವೆನೋ ಅನ್ನುವ ನಿರೀಕ್ಷೆಯಲ್ಲಿ ಚಪ್ಪಲಿ ರಸ್ತೆಗಿಳಿಯಿತು. ಪಾದದ ನಿರೀಕ್ಷೆಯಲ್ಲಿ ದೂಳಿನ ನಡುವೆ ಕಾಯುತ್ತಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ