ಸ್ಟೇಟಸ್ ಕತೆಗಳು (ಭಾಗ ೨೬೧) - ಕಿಟಕಿ
ಗೋಡೆ ಏರಿತು. ಗಾರೆ ಕೆಲಸವಾಯಿತು. ಸುಂದರವಾದ ಮನೆ ನಿರ್ಮಾಣವಾಯಿತು. ವಿದೇಶದಿಂದ ತುಂಬಾ ಮುತುವರ್ಜಿ ವಹಿಸಿ ಅಂದವಾದ ಕಿಟಕಿಯೊಂದನ್ನು ತಯಾರಿಸಿ ಅದನ್ನು ಮನೆಗೆ ಜೋಡಿಸಿ ಅದರ ಅಂದವನ್ನು ಸವಿಯಲು ಆರಂಭಿಸಿದ. ಚಿತ್ತ ವಿನ್ಯಾಸದ ರೇಖಾಚಿತ್ರಗಳು, ಮನಸ್ಸಿಗೊಪ್ಪುವ ಬಣ್ಣ, ಸದಾ ಪರಿಮಳವನ್ನೇ ಬೀರುವ ಸುಗಂಧ ದ್ರವ್ಯಗಳು, ಸಣ್ಣಪುಟ್ಟ ಮುದ್ದಾದ ಕುಸುರಿ ಕೆತ್ತನೆಗಳು, ದಿನವೂ ಇದನ್ನೇ ಗಮನಿಸುವುದು. ಮನಸ್ಸಿಗೆ ಖುಷಿ ಅನುಭವಿಸುವುದು ಅವನ ಕಾಯಕವಾಗುತ್ತ ಹೋಯಿತು. ದಿನಕಳೆದಂತೆ ಕೆಲಸ ಬೇಸರವಾದರೂ ಕಿಟಕಿ ನೋಡುವ ಕೆಲಸವನ್ನ ಬಿಡಲಿಲ್ಲ. ಒಂದು ದಿನ ಯಾರೋ ಹಿರಿಯರ ಒತ್ತಾಯದ ಮೇರೆಗೆ ಹಲವು ಸಮಯಗಳ ನಂತರ ಕಿಟಕಿಯ ಬಾಗಿಲು ತೆರೆಯಿತು. ಬಾಗಿಲು ತೆರೆದು ಹೊರಗೆ ನೋಡಿದಾಗ ಹಸಿರಿನ ಸೊಬಗು ಕಣ್ಣಿಗೆ ತಂಪ ನೀಡುತ್ತಿತ್ತು. ಗಾಳಿ ಮಾತನಾಡುತ್ತಾ ಒಳಗೆ ಆಗಮಿಸಿತು. ಬೆಳಕು ಕುಣಿಯುತ್ತ ಓಡೋಡಿ ಬಂತು. ಹೊರಗಿನ ಸೌಂದರ್ಯ ಒಳಗೆ ಕುಳಿತವನ ಮನಸೂರೆಗೊಂಡಿತು. ಇಷ್ಟು ದಿನ ಬಾಗಿಲು ಮುಚ್ಚಿ ಕುಳಿತದ್ದಕ್ಕೆ ಬೇಸರ ಅನುಭವಿಸಿದ. ಕಿಟಕಿ ಇರುವುದು ಹೊರಗಿನ ದೃಶ್ಯವನ್ನು ಆಸ್ವಾದಿಸಲು, ಹೊರಗಿನಿಂದ ಬೆಳಕನ್ನ ಒಳಗೆ ಪಡೆದುಕೊಳ್ಳಲು, ಹೊರಗಿನಿಂದ ಒಳಗೆ ಇಣುಕಲು ಇದನ್ನು ಅವನು ಅರ್ಥೈಸಿಕೊಂಡ.
ನಮ್ಮೊಳಗೂ ಹಲವು ಕಿಟಕಿಗಳು ಇನ್ನೂ ಮುಚ್ಚಿವೆ. ಬರಿಯ ಕಿಟಕಿಗಳನ್ನು ನೋಡುತ್ತಾ ದಿನದೂಡುವ ಬದಲು ಒಮ್ಮೆ ಬಾಗಿಲು ತೆರೆದು ಹೊರಗೆ ನೋಡುವ ಕೆಲಸವಾಗಬೇಕಾಗಿದೆ .ಒಂದಷ್ಟು ಬೆಳಕು ಒಳಗೆ ಬರಬಹುದು. ಸುಂದರವಾದ ಜಗತ್ತು ಹೊರಗೆ ಕಾಣಬಹುದು. ಕಿಟಕಿಯ ಬಾಗಿಲು ತೆರೆಯುವ ಕೆಲಸ ಮಾತ್ರ ನಮ್ಮದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ